ಬೆಂಗಳೂರು, ಮಾ.12- ಸಿಲಿಕಾನ್ ಸಿಟಿ ವೈಟ್‌ಫೀಲ್ಡ್ ನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಹತ್ವದ ಪ್ರಗತಿ ಸಾಧಿಸಿದ್ದು,ಈ ದುಷ್ಕೃತ್ಯವೆಸಗಿರುವುದು ಕರ್ನಾಟಕ ಮೂಲದ ವ್ಯಕ್ತಿ ಎನ್ನುವುದು ಪತ್ತೆಯಾಗಿದೆ.
ರಾಜ್ಯದ ಕರಾವಳಿ ಅಥವಾ ಮಲೆನಾಡು ಮೂಲದ ಈ ಪಾತಕಿಗೆ ಬೆಂಗಳೂರು ಪರಿಚಯ ಚೆನ್ನಾಗಿ ಇತ್ತು. ಆತ ಯಾವ ಸಂಘಟನೆಗೆ ಸೇರಿದವನು ಎಂಬುದೂ ಎನ್ಐಎ ಅಧಿಕಾರಿಗಳಿಗೆ ಗೊತ್ತಾಗಿದೆ.
ಶಂಕಿತ ಈ ಉಗ್ರ ಹಿಂದೆ ಕಲಘಟಗಿ,ಶಿವನ ಸಮುದ್ರ, ಆಗುಂಬೆ ಗುಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ತರಬೇತಿ ನಡೆಸಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ.
ಈ ಪಾತಕಿಯನ್ನೊಳಗೊಂಡ ತಂಡ ಅರಣ್ಯದಲ್ಲಿ ಟ್ರಯಲ್ ಬಾಂಬ್ ಸ್ಫೋಟ ನಡೆಸಿರುವ ಮತ್ತು ಸರ್ವೈವಲ್ ಕ್ಯಾಂಪ್ಗಳನ್ನು ನಡೆಸಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ದೊರೆತಿದ್ದು ತನಿಖಾ ತಂಡಗಳ ಕಾರ್ಯಾಚರಣೆ ತೀವ್ರಗೊಂಡಿದೆ.
ಪಾತಕಿ ಬಾಂಬರ್ ಸ್ಫೋಟದ ದಿನವೇ ಚೆನ್ನೈಯಿಂದ ತಿರುಪತಿಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಬಸ್ ಮೂಲಕ ಬಂದಿದ್ದಾನೆ. ಕೃಷ್ಣ ರಾಜಪುರ ಬಸ್ ನಿಲ್ದಾಣದಲ್ಲಿ ಇಳಿದು ನಂತರ ಆತ ಮಹದೇವಪುರದ ಗ್ರಾಫೈಟ್ ಇಂಡಿಯಾ ಸರ್ಕಲ್ ಗೆ ಬಂದು ಬಸ್ ಬದಲಾವಣೆ ಮಾಡಿದ್ದಾನೆ. ಬಳಿಕ ಬ್ರೂಕ್ ಫೀಲ್ಡ್ ಕಡೆಗಿನ ಬಸ್ ಹತ್ತಿ ರಾಮೇಶ್ವರ ಕೆಫೆಗೆ ಆಗಮಿಸಿದ್ದಾನೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ.
ಈ ಹಿಂದೆ ಇದೇ ಬಾಂಬ್ ಅನ್ನು ಕುಕ್ಕರ್ ಮತ್ತು ಸ್ಟೀಲ್ ಬಾಕ್ಸ್ನಲ್ಲಿ ಮಾಡಲಾಗುತ್ತಿತ್ತು. ಆದರೆ, ಶಂಕಿತನು ಅತ್ಯಾಧುನಿಕವಾಗಿ ಸಿಲ್ವರ್ ಪೇಪರ್ ಮತ್ತು ಬ್ಯಾಗ್ ಮೂಲಕ ಸಿದ್ಧಪಡಿಸಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.
ಶಂಕಿತ ಬಾಂಬರ್ ತನಿಖಾ ತಂಡಗಳ ಹಾದಿ ತಪ್ಪಿಸುವ ಸಲುವಾಗಿ ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೇ ಸುತ್ತಿ ಬಳಸಿ ಬಂದು, ಮತ್ತೆ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಆತನ ರಹಸ್ಯ ತಾಣ ಸೇರಿರುವ ಸಾಧ್ಯತೆ ಇದೆ. ಸದ್ಯ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ಹಲವಾರು ಭಾಗದಲ್ಲಿ ಶಂಕಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಊಹಾಪೋಹ:
ಆದರೆ, ಶಂಕಿತ ಬಾಂಬರ್ ಕರ್ನಾಟಕದವನು ಎಂಬ ವರದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ ಇವುಗಳೆಲ್ಲ ಊಹಾಪೋಹಗಳು ಎಂದಿದ್ದಾರೆ. ಶಂಕಿತ ಕರ್ನಾಟಕದವನು, ಮಲೆನಾಡಿನವನು ಎಂಬೆಲ್ಲ ಎಂಬ ಊಹಾಪೋಹ ಹರಿಡದಾಡುತ್ತಿವೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಸಾವು ಸಂಭವಿಸಿರಲಿಲ್ಲ. ನಂತರ ಆರಂಭದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಆ ನಂತರ ಎನ್ಐಎಗೂ ತನಿಖೆಯ ಹೊಣೆ ವಹಿಸಲಾಗಿತ್ತು. ಆದಾಗ್ಯೂ, ಶಂಕಿತನನ್ನು ಬಂಧಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.