ಬೆಂಗಳೂರು – ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಮತ್ತೊಮ್ಮೆ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ವಿಷಯ ಮುನ್ನಲೆಗೆ ಬಂದಿದೆ.
ಇತ್ತೀಚೆಗಷ್ಟೇ ಎರಡುವರೆ ವರ್ಷಗಳ ನಂತರ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ನಿರ್ವಹಣೆ ಮಾಡುತ್ತಿದ್ದು ಐದು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ನಾಯಕತ್ವ ಬದಲಾವಣೆ ಎನ್ನುವುದು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ, ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ಕೆಲ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ಸರ್ಕಾರವಿದ್ದಾಗಲೂ ಇಂಥ ಮಾತುಗಳು ಬರುತ್ತವೆ. ಬಿಜೆಪಿ ಸರ್ಕಾರವಿದ್ದಾಗ ಎಷ್ಟು ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರು? ಅವರ ಬೆಂಬಲಿಗರು ಕೂಡ ಮಾತನಾಡಿದ್ದರು’ ಎಂದು ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿದ್ದರಾಮಯ್ಯ ಶಕ್ತಿ ತುಂಬುತ್ತಿದ್ದಾರೆ. ಇದೇ ರೀತಿ ಕೆಲಸ ಮುಂದುವರಿಸಬೇಕು ಎಂದರೇ, ನೀವು ಅಂತಹ ನಾಯಕರಿಗೆ ಶಕ್ತಿ ಕೊಡಬೇಕು’ ಎಂದು ಕೋರಿದರು
ಕೆಲವು ದಿನಗಳ ಹಿಂದಷ್ಟೇ ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಕುರಿತಂತೆ ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಂತೂ ಪರೋಕ್ಷವಾಗಿ ಈ ಹೇಳಿಕೆಯ ವಿರುದ್ಧ ಕಿಡಿ ಕಾರಿದ್ದರು.
ಇದಾದ ಬಳಿಕ ಹೈಕಮಾಂಡ್ ಮಧ್ಯಪ್ರವೇಶಿಸಿ ಯಾರೂ ಕೂಡ ನಾಯಕತ್ವ ಬದಲಾವಣೆ ಕುರಿತಂತೆ ಯಾವುದೇ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿತ್ತು. ಇದಾದ ನಂತರ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗಳಿಗೆ ತಾತ್ಕಾಲಿಕ ತೆರೆ ಬಿದ್ದಿತ್ತಾದರೂ, ಸಂಸದ ಡಿಕೆ ಸುರೇಶ್ ಮತ್ತೆ ಈ ವಿಷಯ ಪ್ರಸ್ತಾಪಿಸುವ ಮೂಲಕ ವಿವಾದಕ್ಕೆ ಮುನ್ನುಡಿ ಇಟ್ಟಿದ್ದರು.
ಇದೀಗ ಮುಖ್ಯಮಂತ್ರಿ ಅವರ ಪುತ್ರ ಯತಿಂದ್ರ ಸಿದ್ದರಾಮಯ್ಯ ಅವರು ಚುನಾವಣೆಯ ಸಮಯದಲ್ಲಿ ತಮ್ಮ ತಂದೆಯ ಅಧಿಕಾರ ಅವಧಿ ಕುರಿತಂತೆ ವಿಷಯ ಪ್ರಸ್ತಾಪಿಸುವ ಮೂಲಕ ಮತ್ತೊಮ್ಮೆ ಈ ವಿಷಯ ಚರ್ಚೆಗೆ ಬರುವಂತೆ ಮಾಡಿದ್ದಾರೆ.