ಫೆಬ್ರವರಿ 6 ರ ಬೆಳಗಿನ ಜಾವ ಸುಮಾರು 4 ಗಂಟೆಯ ಹೊತ್ತಿಗೆ ಟರ್ಕಿ (Turkey) ದೇಶದ ಗಜಿಯಂಟೇಪ್ (Gaziantep) ಎಂಬ ನಗರದಲ್ಲಿ ಭಾರಿ ಭೂಕಂಪ ಸಂಭವಿಸಿತು. ಪ್ರಾಣ ಕಳೆದುಕೊಂಡವರೆಷ್ಟೋ, ಕಳೆದುಹೋದವರೆಷ್ಟೋ, ನೆಲೆ ಕಳೆದುಕೊಂಡವರೆಷ್ಟೋ, ಜೀವನವನ್ನೇ ಕಳೆದುಕೊಂಡವರೆಷ್ಟೋ? ಅಂಕಿ ಅಂಶಗಳು ದಿನೇ ದಿನೇ ಏರುತ್ತಲೇ ಇವೆ. ಎತ್ತ ನೋಡಿದರೂ ಕುಸಿದು ಬಿದ್ದ ಕಟ್ಟಡಗಳು, ಬಿರುಕು ಮೂಡಿದ ರಸ್ತೆಗಳು, ಧರೆಗುರುಳಿದ ವಿದ್ಯುತ್ ಕಂಬಗಳಂತಹ ಭೀಕರ ದೃಶ್ಯಗಳೇ ಕಾಣಿಸುತ್ತಿವೆ. ರಕ್ಷಣಾ ಕಾರ್ಯ ಭರಪೂರದಿಂದ ಸಾಗುತ್ತಿದೆ. ಅವಶೇಷಗಳ ಅಡಿ ಸಿಲುಕಿರುವ ಜನರನ್ನು ಹೊರತರಲಾಗುತ್ತಿದೆ. ಕೆಲವರು ಅಂತೂ ಇಂತೂ ಜೀವವನ್ನು ಕೈಯಲ್ಲಿ ಹಿಡಿದು ಹೊರಬರುತ್ತಿದ್ದರೆ, ಬಹುತೇಕರು ಶವವಾಗಿ ದೊರೆಯುತ್ತಿದ್ದಾರೆ. ಹಿಮ ಮತ್ತು ಮಳೆಯಿಂದ ಕೂಡಿದ ವಾತಾವರಣದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.
ಟರ್ಕಿಯಲ್ಲಿ ಭೂಕಂಪ ಆಗುತ್ತಿರುವುದು ಇದೇ ಮೊದಲಲ್ಲ. ಹಾಗೆ ನೋಡಿದರೆ, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪಕ್ಕೆ ಒಳಗಾಗುವ ದೇಶ ಟರ್ಕಿ. ಅದಕ್ಕೆ ಕಾರಣಗಳೂ ಇವೆ –
ಅದರ ಭೌಗೋಳಿಕ ಪ್ರದೇಶವೇ ಅದಕ್ಕೆ ಶತ್ರು
ಟರ್ಕಿ ಇರುವುದು ಅನಟೋಲಿಯನ್ ಟೆಕ್ಟೋನಿಕ್ ಪ್ಲೇಟ್ (Anatolian tectonic plate) ಮತ್ತದರ ದೋಷ ರೇಖೆ(Fault lines) ಗಳ ಮೇಲೆ. ಈ ಟೆಕ್ಟಾನಿಕ್ ಪ್ಲೇಟ್ ಗಳ ಪರಸ್ಪರ ಘರ್ಷಣೆಯಿಂದ ಬಿಡುಗಡೆಯಾಗುವ ಶಕ್ತಿಯಿಂದಲೇ ಭೂಕಂಪಗಳು ಸಂಭವಿಸುತ್ತವೆ. ಮತ್ತು ದೋಷ ರೇಖೆಗಳಲ್ಲಿಯೇ ಹೆಚ್ಚಿನ ಭೂಕಂಪಗಳಾಗುವವು. ಟರ್ಕಿ ದೇಶದ ಬಹುತೇಕ ಪ್ರದೇಶ ಅನಟೋಲಿಯನ್ ಪ್ಲೇಟ್ ಮೇಲೆಯೇ ಇರುವುದರಿಂದ ಅಲ್ಲಿ ಆಗಾಗ್ಗೆ ಭೂಕಂಪಗಳು ಆಗುತ್ತಲೇ ಇರುತ್ತವೆ.
ತೀವ್ರ ಪ್ರಮಾಣಕ್ಕೆ ಕಾರಣವೇನು? ಯಾಕಿಷ್ಟು ಅಪಾರ ಹಾನಿಯಾಯಿತು?
1. ಭೂಕಂಪದ ಕೇಂದ್ರ ಬಿಂದು ಭೂಮಿಯ ಮೇಲ್ಪದರದಿಂದ ಆಳದಲ್ಲಿದ್ದಷ್ಟು ಭೂಕಂಪದ ತೀವ್ರತೆ ಕಡಿಮೆ. ಆದರೆ ಮೊನ್ನೆ ನಡೆದ ಭೂಕಂಪದಲ್ಲಿ, ಭೂಕಂಪದ ಕೇಂದ್ರ ಬಿಂದು ಭೂಮಿಯ ಮೇಲ್ಪದರದಿಂದ ಕೇವಲ 18 ಕಿಮಿಗಳ ಆಳದಲ್ಲಿತ್ತು. ಹಾಗಾಗಿ, ತೀವ್ರ ಪರಿಣಾಮಗಳು ಕಾಣಿಸಿದವು.
2. ಟರ್ಕಿಯ ಭೂಕಂಪ Strike – slip ಇಂದ ಸಂಭವಿಸಿದೆ ಎಂದು ತಜ್ಞರು ಹೇಳಿದ್ದಾರೆ. Strike – slip ಎಂದರೆ, ವಿರುದ್ಧ ದಿಕ್ಕಿನಲ್ಲಿ ಚಲಿಸುವ (ಒಂದು ಹಿಂದೆ, ಮತ್ತೊಂದು ಮುಂದೆ) ಎರಡು ಟೆಕ್ಟಾನಿಕ್ ಪ್ಲೇಟ್ ಗಳ ಘರ್ಷಣೆಯಿಂದ ಉಂಟಾಗುವ ಭೂಕಂಪಕ್ಕೆ Strike – slip ಎಂದು ಹೇಳಲಾಗುತ್ತದೆ. ಇಂತಹ ಘರ್ಷಣೆ ಗಳಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುವುದರಿಂದ ದೊಡ್ಡ ಪ್ರಮಾಣದ ಹಾನಿ ಆಗುತ್ತದೆ.
3. ಕೆಲವೇ ಗಂಟೆಗಳ ಅಂತರದಲ್ಲಿ ಪದೇ ಪದೇ ಸಂಭವಿಸಿದ ಭೂಕಂಪಗಳೂ ಹೆಚ್ಚಿನ ಹಾನಿಗೆ ಕಾರಣವಾದವು.
4. ವರದಿಯೊಂದರ ಪ್ರಕಾರ, ಭೂಕಂಪ ಸಂಭವಿಸಿದ ಪ್ರದೇಶದಲ್ಲಿ ಸುಮಾರು 2 ಮಿಲಿಯನ್ ಜನರು ವಾಸಿಸುತ್ತಿದ್ದರಂತೆ. ಅಲ್ಲದೆ ಅಲ್ಲಿಯ ಕಟ್ಟಡಗಳಲ್ಲಿ ಬಳಸಿದ ಸಿಮೆಂಟ್ ಇತ್ಯಾದಿಗಳು ಕಳಪೆ ಗುಣಮಟ್ಟ ಹೊಂದಿದ್ದರಿಂದಲೂ ಹೆಚ್ಚಿನ ಹಾನಿಗೆ ಕಾರಣವಾಯಿತು ಎನ್ನಲಾಗಿದೆ.
5. ಮಳೆ ಮತ್ತು ಹಿಮದಿಂದಲೂ ರಕ್ಷಣಾ ಮತ್ತು ಶೋಧ ಕಾರ್ಯದ ವೇಗ ತಗ್ಗಿದ್ದರಿಂದ ಹಾನಿಯ ಪ್ರಮಾಣವನ್ನು ತಗ್ಗಿಸುವುದು ಕಷ್ಟವಾಗುತ್ತಿದೆ.
ಆತಂಕ ಇನ್ನೂ ಮುಗಿದಿಲ್ಲ!
ತಜ್ಞರ ಪ್ರಕಾರ ಇಂತಹ ದೊಡ್ಡ ಪ್ರಮಾಣದ ಭೂಕಂಪಗಳು ಹಲವು aftershock ಗಳನ್ನು ಹೊಂದಿರುತ್ತವೆ. Aftershock ಎಂದರೆ, ಘರ್ಷಣೆಗೆ ಒಳಗಾದ ಟೆಕ್ಟಾನಿಕ್ ಪ್ಲೇಟ್ ಗಳು ಮತ್ತೆ ಸಹಜ ಸ್ಥಿತಿಗೆ ಮರಳುವಾಗಲೂ ಭೂಮಿ ಕಂಪಿಸುತ್ತದೆ. ಇದು ಕೆಲವು ಗಂಟೆಗಳಲ್ಲೇ ಮುಗಿಯಲೂಬಹುದು ಅಥವಾ ಕೆಲವು ವರ್ಷಗಳವರೆಗೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರಬಹುದು. ಕೆಲವೊಮ್ಮೆ ಯಾವುದೇ ಹಾನಿ ಆಗದೆ ಲಘುವಾಗಿ ಕಂಪಿಸಬಹುದು. ಇನ್ನೂ ಕೆಲವೊಮ್ಮೆ ಹಾನಿ ಮಾಡುವಷ್ಟು ದೊಡ್ಡ ಪ್ರಮಾಣದಲ್ಲಿಯೂ ಸಂಭವಿಸಬಹುದು. ಹಾಗಾಗಿ, ಟರ್ಕಿಯಲ್ಲಿ ಸಂಭವಿಸಿದ ಈ ಭೂಕಂಪಕ್ಕೂ aftershock ಗಳನ್ನು ನಿರೀಕ್ಷಿಸಲಾಗಿದೆ. ಹಾಗಾಗಿ, ಅಪಾಯದ ಕತ್ತಿ ಇನ್ನೂ ಟರ್ಕಿಯ ಮೇಲೆ ತೂಗುತ್ತಲೇ ಇದೆ.
ಚಿತ್ರಗಳ ಕೃಪೆ – ಅಂತರ್ಜಾಲ
1 ಟಿಪ್ಪಣಿ
Виза цифрового кочевника в Испании https://klaipedatours.ru/ .