ಬೆಂಗಳೂರು, ಮಾ.13- ಲೋಕಸಭೆ ಚುನಾವಣೆ ಸನಿಹದಲ್ಲಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ(ಸಿಎಎ – CAA) ಕಾಯಿದೆ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸುವುದು ಅನುಮಾನ.
ಪಶ್ಚಿಮ ಬಂಗಾಳ ತಮಿಳುನಾಡು ಕೇರಳ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಘೋಷಿಸಿರುವ ಬೆನ್ನೆಲೆ ಕರ್ನಾಟಕ ಸರ್ಕಾರವು ಕೂಡ ಅದೇ ಹಾದಿಯಲ್ಲಿ ನಡೆಯುವ ಸೂಚನೆಗಳು ಗೋಚರವಾಗಿವೆ.
ಸಂಪುಟದಲ್ಲಿ ಚರ್ಚೆ:
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ಸಂಘದಲ್ಲಿರುವಾಗ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಆತುರಾತುರವಾಗಿ ಈ ಮಸೂದೆಯನ್ನು ಜಾರಿಗೆ ತಂದಿದೆ ಇದನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೌರತ್ವ ಕಾಯ್ದೆ ಕುರಿತಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿಲುವು ಅಪಾಯಕಾರಿಯಾಗಿದೆ ರಾಜಕೀಯ ಕಾರಣಕ್ಕಾಗಿ ಇಂಥದೊಂದು ತೀರ್ಮಾನ ಕೈಗೊಳ್ಳುವ ಮೂಲಕ ತಪ್ಪು ದಾರಿಯಲ್ಲಿ ನಡೆಯುತ್ತಿದೆ ಎಂದು ಆಪಾದಿಸಿದರು.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಎ ಬಗ್ಗೆ ಈವರೆಗೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಹಾಗೂ ಸಂಪುಟದ ಇತರ ಸಚಿವರುಗಳು ಚರ್ಚೆ ನಡೆಸಿ, ಅದನ್ನು ಅಂಗೀಕರಿಸಬೇಕೊ ಅಥವಾ ತಿರಸ್ಕರಿಸಬೇಕೊ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಿಎಎಯನ್ನು ಜಾರಿಗೊಳಿಸುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಆದರೆ ಯಾವ ರೀತಿ ಎಂದು ಸದ್ಯಕ್ಕೆ ಹೇಳಲಾಗುವುದಿಲ್ಲ ಎಂದರು.