ಬೆಳಗಾವಿ:
ಉತ್ತರ ಕರ್ನಾಟಕದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದೊಂದಿಗೆ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ಮೂಲಕ ಪುಂಡಾಟಿಕೆಗೆ ಯತ್ನಿಸಿದ್ದಾರೆ.
ಕಾನೂನು ಸುವ್ಯವಸ್ತೆಯ ಕಾರಣಕ್ಕೆ ಗೃಹ ಇಲಾಖೆ ಬೆಳಗಾವಿಯಲ್ಲಿ ಎಂಇಎಸ್ ನ ಮಹಾಮೇಳಾವ್ ನಿಷೇಧಿಸಿದೆ.
ಇದನ್ನು ವಿರೋಧಿಸಿ ಎಂಇಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜೈ ಮಹಾರಾಷ್ಟ್ರ, ಜೈ ಬೆಳಗಾವಿ ಎಂದು ಘೋಷಣೆಗಳನ್ನು ಕೂಗುತ್ತಾ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾಮೇಳವ ಕಾರ್ಯಕ್ರಮದ ವೇದಿಕೆಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಿಗೆ ಜೈ ಮಹಾರಾಷ್ಟ್ರ ಎಂದು ಬರೆದಿರುವ ಪತ್ರಗಳನ್ನು ಅಂಟಿಸಿ ಕನ್ನಡ ವಿರೋಧಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಮತ್ತೊಂದೆಡೆ
ಮಹಾಮೇಳಾವ್ ಮತ್ತು ಎಂಇಎಸ್ ಕಾರ್ಯಕರ್ತರ ಪ್ರತಿಭಟನೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೂಡ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಎಂಇಎಸ್ ವಿರುದ್ಧದ ಘೋಷಣೆಗಳನ್ನು ಕೂಗುತ್ತ ಎಂಇಎಸ್ ಪುಂಡರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷವೂ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಎಂಇಎಸ್ ಪುಂಡರು ಅನಗತ್ಯವಾಗಿ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಾರೆ. ಇದು ಖಂಡನೀಯ ಎಂದು ಕರವೇ ಕಾರ್ಯಕರ್ತರು ಎಂದು ಹೇಳಿದರು.
ಈ ವೇಳೆ ಪೊಲೀಸರು ಕನ್ನಡ ಪರ ಹೋರಾಟಗಾರರನ್ನು ಕೂಡ ತಮ್ಮ ವಶಕ್ಕೆ ಪಡೆದುಕೊಂಡರು.

