ಬೆಂಗಳೂರು,ಮೇ.13-
ಮಹಾರಾಷ್ಟ್ರ ರಾಜಕಾರಣವೇ ಬೇರೆ ಕರ್ನಾಟಕದ ರಾಜಕಾರಣವೇ ಬೇರೆ, ಇಲ್ಲಿ ಮಹಾರಾಷ್ಟ್ರದ ರೀತಿಯಲ್ಲಿ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ರಾಜ್ಯ ಸರ್ಕಾರ ಪತನವೂ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಮತ್ತುಪಕ್ಷದೊಳಗೆ ಅಸಮಾಧಾನ ಇರೋದು ನಿಜ. ಸರ್ಕಾರ ಇರುವವರೆಗೂ ಇಂತಹ ಸಮಸ್ಯೆಗಳು ಇರಲಿದೆ. ಆಗಾಗ ಇದಕ್ಕೆಲ್ಲ ರಿಪೇರಿ ಮಾಡುತ್ತೇವೆ. ಇದೇ ವಿಚಾರ ಇಟ್ಟುಕೊಂಡು ಸರ್ಕಾರ ಬೀಳಲಿದೆ ಎನುವುದು ಸರಿಯಲ್ಲ ಎಂದು ತಿಳಿಸಿದರು.
ಪಕ್ಷದೊಳಗಿನ ಸಮಸ್ಯೆಯನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ. ಸರ್ಕಾರದೊಳಗಿನ ಸಮಸ್ಯೆಯನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ ಎಂದರು.
ಜಂಪ್ ಮಾಡುವವರು 5 ಮೀಟರ್, 7 ಮೀಟರ್ ಜಂಪ್ ಮಾಡಬಹುದು, ಆದರೆ15 ಮೀಟರ್ ಜಂಪ್ ಮಾಡುವುದು ಕಷ್ಟದ ಕೆಲಸ. ಅದೇ ರೀತಿಯಲ್ಲಿ ಕಾಂಗ್ರೆಸ್ ದೊಡ್ಡ ಪ್ರಮಾಣದ ಬಹುಮತವನ್ನು ಹೊಂದಿದೆ ಇಷ್ಟೊಂದು ಬಹುಮತದ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಮಗೆ 5 ವರ್ಷ ವಿಧಾನಸಭೆಗೆ ಜನಾದೇಶ ಇದೆ. ನಮ್ಮದೇನಿದ್ರೂ ಪಾರ್ಟಿ ಒಳಗಿನ ಅಸಮಾಧಾನ, ಪಾರ್ಟಿ ಹೊರಗೆ ನಮ್ಮ ಘರ್ಷಣೆಯಲ್ಲ. ಅವರ ಪಕ್ಷದಲ್ಲೂ ಭಿನ್ನಮತ ಇಲ್ವಾ ಬಿಜೆಪಿಯವರು ಹೇಗೆಲ್ಲ ಮಾತಾಡ್ತಿದ್ದಾರೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.
ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇರಬಹುದು, ಅದನ್ನೇ ಇಟ್ಕೊಂಡು ಸರ್ಕಾರ ಬೀಳುತ್ತೆ ಎನ್ನುವುದು ಸುಳ್ಳು. ಮಹಾರಾಷ್ಟ್ರ ರಾಜಕೀಯ ಬೇರೆ, ಅದನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲು ಬರುವುದಿಲ್ಲ
ಎಂದು ವಿವರಿಸಿದರು.