ಕೊಪ್ಪಳ: ಕೆಟ್ಟ ಮೇಲೂ ಬುದ್ದಿ ಬರಲಿಲ್ಲ ಈ ಬಿಜೆಪಿ ನಾಯಕರಿಗೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಹೌದು, ಇತ್ತೀಚೆಗಷ್ಟೆ ಸಾವನ್ನಪ್ಪಿದ ಗುತ್ತಿಗೆದಾರ ಸಂತೋಪ ಪಾಟೀಲ್ ಪ್ರಕರಣ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿತ್ತು. ಜೊತೆಗೆ ಸ್ವತಃ ಸರ್ಕಾರವನ್ನೇ ಮುಜುಗುರಕ್ಕೀಡು ಮಾಡಿತ್ತು. ಈ ಘಟನೆ ಮಾಡಿಸುವ ಮುನ್ನವೇ ಗುತ್ತಿಗೆದಾರರ ಪ್ರತಿಭಟನೆಯಲ್ಲಿ ಸಚಿವ ಆನಂದ್ ಸಿಂಗ್ ತೋರಿದ ದರ್ಪ ಬಹುತೇಕರ ಆಕ್ಷೇಪಕ್ಕೂ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗಾದ ಅನ್ಯಾಯಕ್ಕಾಗಿ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡುವುದು ಸಹಜ. ಆದರೆ ಧಿಕ್ಕಾರ ಕೂಗಿದ್ದಕ್ಕಾಗಿಯೇ ಸಚಿವ ಆನಂದ್ ಸಿಂಗ್ ಕೋಪಗೊಂಡರೆ ಹೇಗೆ?
ಕೊಪ್ಪಳದಲ್ಲಿ ಗುತ್ತಿಗೆದಾರರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಗುತ್ತಿಗೆದಾರರೊಂದಿಗೆ ಸಚಿವ ಆನಂದಸಿಂಗ್ ಮಾತಿನ ಚಕಮಕಿ ನಡೆಸಿದರು. ಕೊಪ್ಪಳದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಗುತ್ತಿಗೆದಾರರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸಚಿವ ಆನಂದ್ ಸಿಂಗ್ ಭೇಟಿ ನೀಡಿದ್ದರು. ಕಳೆದ ನಾಲ್ಕು ವರ್ಷದಿಂದ ನರೇಗಾ, ಪಿಆರ್ ಇಡಿ ಕಾಮಗಾರಿಗಳ ಬಿಲ್ ಬಿಡುಗಡೆಯಾಗಿಲ್ಲ. ನಾವು ಏನು ಮಾಡಬೇಕು? ಎಂದು ಪ್ರತಿಭಟನಾ ನಿರತ ಗುತ್ತಿಗೆದಾರರು ಸಚಿವರನ್ನು ಪ್ರಶ್ನಿಸಿದರು. ನಮಗೆ ಬರಬೇಕಾದ ಬಿಲ್ ಮೊತ್ತ ಬೇಗ ಬರದೇ ಇದ್ರೆ ಆತ್ಮಹತ್ಯೆಯೊಂದೆ ನಮಗೆ ಪರಿಹಾರ ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ನನಗೆ ಮಾತನಾಡಲು ಅವಕಾಶ ಕೊಡಿ. ನೀನೆ ಮಾತನಾಡುವುದು ಆದರೆ ನಾನೇಕೆ ಬರಬೇಕು?
ನೀವೆ ಧಿಕ್ಕಾರ ಕೂಗಿಕೊಂಡು ಹೋಗಿ ಎಂದು ಸಿಡಿಮಿಡಿಗೊಂಡರು.