ಬೆಂಗಳೂರು,ನ.9-
ಕಾರ್ಖಾನೆ ಗಾರ್ಮೆಂಟ್ಸ್ ಕಟ್ಟಡ ನಿರ್ಮಾಣ ಹೀಗೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ರೂಪಿಸಲಾಗಿರುವ ಇಎಸ್ಐ ವ್ಯವಸ್ಥೆಗೆ ಕನ್ನ ಹಾಕುವ ಪ್ರಯತ್ನ ನಡೆದಿದೆ.
ನಕಲಿ ಕಂಪನಿಗಳನ್ನು ಸೃಷ್ಟಿಸಿ ಅವುಗಳ ಮೂಲಕ ಕಾರ್ಮಿಕರನ್ನು ಸೃಷ್ಟಿಸಿ ಇಎಸ್ಐ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸುತ್ತಿದ್ದ ವ್ಯವಸ್ಥಿತ ಜಾಲವನ್ನು ಬೆಂಗಳೂರಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಫಲಾನುಭವಿಗಳಲ್ಲದ 869 ಮಂದಿಗೆ ಇ-ಪೆಹಚಾನ್ ಕಾರ್ಡ್‌ಗಳನ್ನು (ಇಎಸ್ಐ) ಮಾಡಿಸಿ, ಇಎಸ್ಐ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ, ಸರ್ಕಾರಕ್ಕೆ ಕೋಟ್ಯಾಂತರ ರೂ ನಷ್ಟವುಂಟು ಮಾಡುತ್ತಿದ್ದ ನಾಲ್ವರು ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶ್ರೀಧರ್, ರಮೇಶ್ ಶಿವಗಂಗಾ, ಶ್ವೇತಾ, ಆಡಿಟರ್ ಶಶಿಕಲಾ ಗ್ಯಾಂಗ್ ನ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ಪೆಹಚಾನ್ ಕಾರ್ಡ್ ಮಾಡಿಸಲು ಬಳಸುತ್ತಿದ್ದ ನಕಲಿ ಕಂಪನಿಗಳ ಸೀಲ್, ವಿವಿಧ ಆಸ್ಪತ್ರೆಯ ವೈದ್ಯರ ಸೀಲ್, 4 ಲ್ಯಾಪ್ ಟಾಪ್ ಹಾಗೂ 59,500 ನಗದು ಸೇರಿದಂತೆ ಇ-ಪೆಹಚಾನ್ (ಇಎಸ್ಐ) ಕಾರ್ಡ್‌ಗಳ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
www.ESIC.gov.in ವೆಬ್ ಸೈಟ್ ನಲ್ಲಿ ಅಸ್ಥಿತ್ವದಲ್ಲಿಲ್ಲದ ಕಂಪನಿಗಳನ್ನು ನೋಂದಣಿ ಮಾಡಿಕೊಂಡು, ಆ ಕಂಪನಿಗಳ ಸಹಾಯದಿಂದ ರಿಜಿಸ್ಟರ್ ಮಾಡಿಕೊಂಡ ಪ್ರತಿಯೊಬ್ಬ ಸಾರ್ವಜನಿಕರಿಂದ 20 ಸಾವಿರಕ್ಕೂ ಹೆಚ್ಚಿನ ಹಣವನ್ನು ಮುಂಗಡವಾಗಿ ಪಡೆದುಕೊಂಡು ತಾವು ನಕಲಿಯಾಗಿ ರಿಜಿಸ್ಟರ್ ಮಾಡಿಸಿದ ಕಂಪನಿಯಲ್ಲಿ ನೌಕರರೆಂದು ಬಿಂಬಿಸಿ, ಇ-ಪೆಹಚಾನ್ ಕಾರ್ಡ್‌ಗಳನ್ನು (ಇಎಸ್ಐ) ಮಾಡಿಸುತ್ತಿದ್ದರು ಸಾರ್ವಜನಿಕರಿಂದ ಪ್ರತಿ ತಿಂಗಳು 500 ಹಣ ಪಡೆದು ಇಎಸ್ಐ. ಖಾತೆಗೆ 280 ರೂ.ಕಟ್ಟಿ ಉಳಿದ 220 ರೂಪಾಯಿಯನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಈ ರೀತಿಯಾಗಿ ಇ-ಪೆಹಚಾನ್ ಕಾರ್ಡ್ ಪಡೆದುಕೊಂಡಿದ್ದ ಕಾರ್ಮಿಕರಲ್ಲದ ರೋಗಿಗಳು ಇಎಸ್ಐ ಆಸ್ಪತ್ರೆ, ಹಾಗೂ ಖಾಸಗಿ ಆಸ್ಪತ್ರೆಯ ಇಎಸ್ಐ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ವಂಚಿಸುತ್ತಿದ್ದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣವನ್ನು ದಾಖಲಿಸಲಾಗಿತ್ತು.
Previous Articleಬಂಗಾರ ಕದ್ದರೆ 235 ವರ್ಷ ಜೈಲು .
Next Article ಯೋಗೇಶ್ವರ್ ಗೆಲ್ಲೋದು ಪಕ್ಕಾ ಅಂತೆ.