ಬೆಂಗಳೂರು,ಜ.6- ದೇಶದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಉಗ್ರ ಕೃತ್ಯಗಳಿಗೆ ದುಬೈನಿಂದ ಹಣ ಸಂಗ್ರಹಿಸಿ ಕರ್ನಾಟಕ ಹಾಗೂ ಕೇರಳದ ಕಾರ್ಯಕರ್ತರ ಮೂಲಕ ಬಿಹಾರಕ್ಕೆ ತಲುಪಿಸುತ್ತಿದ್ದ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜಾದ್ ಆಲಂ ಬಂಧಿತ ಆರೋಪಿ. ಈತ ಯುಎಇನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಪಿಎಫ್ಐ ಕಾರ್ಯಕರ್ತರ ವಿರುದ್ಧ 2022ರ ಜುಲೈನಲ್ಲಿ ಬಿಹಾರದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು.
ಆರೋಪಿಗಳು ಪಿಎಫ್ಐ ಸಂಘಟನೆಯ ಮೂಲಕ ಜನರ ನಡುವೆ ಧರ್ಮ, ಮತೀಯ ದ್ವೇಷ ಮೂಡಿಸುತ್ತಿದ್ದಾರೆ. ಆ ಮೂಲಕ ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂಬುದು ಎನ್ಐಎ ತನಿಖೆ ವೇಳೆ ಬಹಿರಂಗವಾಗಿತ್ತು.
ಅಲ್ಲದೆ, 2047ರ ವೇಳೆಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಅಂಶಗಳನ್ನು ಉಲ್ಲೇಖಿಸಿ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ ಇದುವರೆಗೂ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಮೊಹಮ್ಮದ್ ಸಜ್ಜಾದ್ನನ್ನು 18ನೇ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
Previous Articleವಿಷದ ಲಡ್ಡು ಕಳುಹಿಸಿದನು ಸಿಕ್ಕಿ ಬಿದ್ದ
Next Article ಸಿ.ಟಿ. ರವಿ ಇನ್ನೊಂದು ದೂರು ನೀಡಿದ್ದಾರೆ