ಹಾಸನ,ಜೂ.23-
ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಗ್ರಹಚಾರ ನೆಟ್ಟಗಿಲ್ಲ. ಲೈಂಗಿಕ ಕಿರುಕುಳ ಆರೋಪದಲ್ಲಿ ಒಬ್ಬ ಮಗ ಜೈಲು ಪಾಲಾಗಿರುವ ಬೆನ್ನಲ್ಲೇ ಇದೀಗ ಅಸಹಜ ಲೈಂಗಿಕ ಚಟುವಟಿಕೆ ಆರೋಪದಲ್ಲಿ ಮತ್ತೊಬ್ಬ ಮಗ ಕೂಡ ಬಂಧಿತನಾಗಿದ್ದಾನೆ.
ಸಲಿಂಗ ಕಾಮ,ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಶಾಸಕ,ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಹಾಸನ ಜಿಲ್ಲಾ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲದೇ ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಈ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ನಡುವೆ ದೂರುದಾರ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಪ್ರತಿ ದೂರು ನೀಡಲು ಸೂರಜ್ ರೇವಣ್ಣ ಹಾಸನದ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದ್ದ ವೇಳೆ ಪೊಲೀಸರು ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಸೂರಜ್ ರೇವಣ್ಣನನ್ನು ಬಂಧಿಸಲಾಗಿದೆ.
ಈ ನಡುವೆ ಪ್ರಕರಣದ ವಿಚಾರಣೆಗಾಗಿ ಸರ್ಕಾರ ಸಕಲೇಶಪುರ ಡಿವೈಎಸ್ಪಿ ಅವರನ್ನು ತನಿಖಾಧಿಕಾರಿಯಾಗಿಬ ನೇಮಿಸಿದ್ದು, ವಿಚಾರಣೆ ಬಳಿಕ ಸೂರಜ್ ರೇವಣ್ಣ ಅವರನ್ನು ತನಿಖಾಧಿಕಾರಿ ಪ್ರಮೋದ್ ಕುಮಾರ್ ಬಂಧಿಸಿದ್ದಾರೆ.
ಏನಿದು ಪ್ರಕರಣ:
ಜೆಡಿಎಸ್ ಕಾರ್ಯಕರ್ತರಾಗಿದ್ದ ದೂರುದಾರ, ಡಾ.ಸೂರಜ್ ರೇವಣ್ಣಗೆ ಪರಿಚಿತರು. ನೌಕರಿ ಕೊಡಿಸುವಂತೆ ಕೋರಿ ಜೂ.16 ರಂದು ಸೂರಜ್ ರೇವಣ್ಣ ಅವರ ಗನ್ನಿಕಡ ಫಾರಂಹೌಸ್‌ಗೆ ತೆರಳಿದ್ದ ವೇಳೆ ತಮ್ಮ ಮೇಲೆ ಸೂರಜ್ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಮಧ್ಯೆ, ಸೂರಜ್ ರೇವಣ್ಣ ಅವರ ಆಪ್ತ ಹನುಮನಹಳ್ಳಿಯ ಶಿವಕುಮಾರ್ ಎಂಬುವರು ದೂರುದಾರನೇ ವಿರುದ್ಧವೇ ಹೊಳೆನರಸೀಪುರ ಠಾಣೆಯಲ್ಲಿ ಶುಕ್ರವಾರ ಪ್ರತಿದೂರು ದಾಖಲಿಸಿದ್ದಾರೆ. ದೂರುದಾರ ಜೂ.16ರಂದು ತಮ್ಮ ನಾಯಕ (ಸೂರಜ್)ರ ಬಳಿ ಕೆಲಸ ಕೇಳಲು ಬಂದಿದ್ದರು. ಬಳಿಕ, ನಿಮ್ಮ ನಾಯಕರಿಂದ ಕೆಲಸ ಕೊಡಿಸಲು ಸಾಧ್ಯವಿಲ್ಲ. ನನಗೆ ತುಂಬಾ ಕಷ್ಟವಿದೆ ಎಂದು ಹೇಳಿ 5 ಕೋಟಿ ರು. ಗಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶಾಸಕರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಖುದ್ದು ಸೂರಜ್ ಅವರೇ ನಿನ್ನೆ ಸಂಜೆ ಹಾಸನ ಪೊಲೀಸ್ ಠಾಣೆಗೆ ಆಗಮಿಸಿ ದೂರುದಾರನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
Previous Articleಸಾಕ್ಷಿ ನಾಶಕ್ಕೆ ಯತ್ನಿಸಿದ ದರ್ಶನ್ ಗ್ಯಾಂಗ್.
Next Article ಸೂರಜ್ ರೇವಣ್ಣ ಪ್ರಕರಣ CID ತನಿಖೆ.