ಬೆಂಗಳೂರು.
ರಾಜ್ಯದ ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಮನೆ ಕಟ್ಟುವುದು ಅಷ್ಟು ಸುಲಭದ ವಿಷಯವಲ್ಲ ಇಲ್ಲಿ ಸಾಲ ಮಾಡಿ ಕಷ್ಟಪಟ್ಟು ಹಣ ಹೊಂದಿಸಿ ನಿವೇಶನ ಖರೀದಿ ಮಾಡಿ ಮನೆ ಕಟ್ಟಲು ಮುಂದಾದರೆ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನೂರಾರು ತಕರಾರುಗಳು ಎದುರಾಗುತ್ತದೆ.
ಜನಸಾಮಾನ್ಯರು ಈ ತಕರಾರುಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗುವುದು ರೂಢಿಯಾಗಿ ಬಿಟ್ಟಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ನಡೆಯುವ ಜೊತೆಗೆ ಮನೆ ನಿರ್ಮಾಣದಲ್ಲಿ ನಕ್ಷೆ ಉಲ್ಲಂಘನೆ ಕೂಡ ನಡೆಯುವ ಸಂಗತಿ ಮಾಮೂಲಾಗಿದೆ.
ಇದನ್ನು ತಪ್ಪಿಸುವ ದೃಷ್ಟಿಯಿಂದ ಬೆಂಗಳೂರು ನಗರ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸದೊಂದು ಯೋಜನೆ ರೂಪಿಸಿದ್ದಾರೆ.
ಮನೆ ನಿರ್ಮಾಣ ಸಮಯದಲ್ಲಿ ಜನಸಾಮಾನ್ಯರಿಗೆ ಆಗುವ ಕಿರಿಕಿರಿ ಮತ್ತು ನಿಯಮ ಉಲ್ಲಂಘನೆಗೆ ಮೂಲ ಕಾರಣ ಕಟ್ಟಡ ನಕ್ಷೆ. ಈ ಕಟ್ಟಡ ನಕ್ಷೆಯನ್ನು ಜನರು ಸುಲಭವಾಗಿ ಪಡೆದುಕೊಂಡರೆ ಎಲ್ಲಿಯೂ ಕೂಡ ನಿಯಮ ಉಲ್ಲಂಘನೆ ಆಗುವುದಿಲ್ಲ ಜೊತೆಗೆ ಅಕ್ರಮವೂ ನಡೆಯುವುದಿಲ್ಲ ಮಧ್ಯವರ್ತಿಗಳಿಗೆ ಅವಕಾಶವೇ ಇರುವುದಿಲ್ಲ ಎಂಬುದನ್ನು ಮನಗಂಡ ಅವರು ರೂಪಿಸಿದ ಯೋಜನೆ ನಂಬಿಕೆ ನಕ್ಷೆ.
ಬೆಂಗಳೂರಿನಲ್ಲಿ ನಿವೇಶನ ಹೊಂದಿರುವ ಜನರು ಮನೆ ಕಟ್ಟುವ ಮುನ್ನ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್‌ಗಳ ಬಳಿ ಅನುಮೋದಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. ಗರಿಷ್ಠ 50/80 ವಿಸ್ತೀರ್ಣದವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯವಾಗಲಿದೆ.
ಬಿಡಿಎ, ಗೃಹನಿರ್ಮಾಣ ಸಂಘದವರು 50/80 ವಿಸ್ತೀರ್ಣದ ವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋದಕರಂತೆ ಅನುಮೋದಿತ ಎಂಜಿನಿಯರ್ ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಎರಡು ಪ್ರದೇಶದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು ಇದಕ್ಕೆ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರಾಧ್ಯಂತ ಯೋಜನೆ ವಿಸ್ತರಿಸಲಾಗಿದೆ ಈ ಮೂಲಕ ಸ್ಥಳೀಯ ಆಡಳಿತವನ್ನು ಜನಸ್ನೇಹಿಯಾಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದಾರೆ.
Previous Articleಮೋಹಕ ತಾರೆ ರಮ್ಯಾಗೆ ಮದುವೆಯಂತೆ.. ನಿಜಾನಾ?
Next Article ದೀಪಾವಳಿಗೆ ಸರ್ಕಾರ ಡಮಾರ್.