ಬೆಂಗಳೂರು,ಅ.13-
ಕಂದಾಯ ಗ್ರಾಮಗಳ ಘೋಷಣೆಗಾಗಿ ಹಲವಾರು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ತಾಂಡ,ಹಟ್ಟಿ, ಮಜರೆ,ದೊಡ್ಡಿ,ಹಾಡಿಗಳ ಜನರಿಗೆ ರಾಜ್ಯ ಸರ್ಕಾರ ಖುಷಿ ಕೊಡುವ ಸಂಗತಿಯನ್ನು ನೀಡಿದೆ.
ರಾಜ್ಯದ 3,500ಕ್ಕೂ ಹೆಚ್ಚು ತಾಂಡಾ, ಹಟ್ಟಿ, ಹಾಡಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ನವೆಂಬರ್ ಕೊನೆಯ ವಾರ 60 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ರಾಜ್ಯದ
ಸರ್ಕಾರಿ, ಖಾಸಗಿ ಜಮೀನುಗಳಲ್ಲಿ ಇರುವ ಗ್ರಾಮಗಳು ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಇಲ್ಲದ ಕಾರಣ ಮೂಲ ಸೌಕರ್ಯ ಅಭಿವೃದ್ಧಿಗೆ ತೊಡಕಾಗಿತ್ತು. ಹಿಂದೆ ಆರಂಭವಾಗಿದ್ದ ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆಗಳು ಪೂರ್ಣಗೊಂಡಿರಲಿಲ್ಲ. ಈಗ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಸರ್ಕಾರದ ಈ ನಿರ್ಧಾರದಿಂದಾಗಿ ಒಟ್ಟು
60 ಸಾವಿರ ಕುಟುಂಬಗಳ ಹೆಸರಿಗೆ ಅವರು ನೆಲೆ ನಿಂತ ಜಾಗವನ್ನು ನೋಂದಣಿ ಮಾಡಿಸಿಕೊಡಲಾಗುವುದು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಕ್ಕುಪತ್ರ ಒಂದೇ ಬಾರಿಗೆ ನೀಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಬಣ್ಣಿಸಿದರು.
ಈ ಯೋಜನೆಗಾಗಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ವಿಜಯಪುರ, ದಾವಣಗೆರೆ ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ ನಂತರದಲ್ಲಿ ಉಳಿದ ಜಿಲ್ಲೆಯ ಜನರಿಗೂ ಈ ಸೌಲಭ್ಯ ಸಿಗಲಿದೆ ಎಂದರು.
ಇದಕ್ಕಾಗಿ ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಎರಡು ಪ್ರತ್ಯೇಕ ಸಮಾವೇಶಗಳನ್ನು ಹಮ್ಮಿಕೊಂಡು ದಾಖಲೆ ಪತ್ರ ನೀಡಲಾಗುವುದು. ಈ ಮೂಲಕ ಇದುವರೆಗೂ ಗುರುತು ಇಲ್ಲದ ಗ್ರಾಮಗಳಿಗೆ ಹೆಸರು, ವಿಳಾಸ ನೀಡಲಾಗುವುದು ಎಂದು ತಿಳಿಸಿದರು
ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲವಕಾಶ ನೀಡಲಾಗಿದೆ ಈ ಆಕ್ಷೇಪಣೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಲಾಗುವುದು.ಅದರೆ ಶೇ 90ರಷ್ಟು ಭೂಮಿ ಸರ್ಕಾರಿ ಜಾಗವೇ ಇರುವುದರಿಂದ ಸಮಸ್ಯೆ ಇಲ್ಲ.ಒಂದು ವೇಳೆ ಖಾಸಗಿ ಭೂಮಿಯಲ್ಲಿದ್ದರೆ ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ವಿವರ ನೀಡಿದರು.