ಬೆಂಗಳೂರು.ಅ.24:
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಭರ್ಜರಿ ರಂಗು ಬಂದಿದೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಎದುರಿಗೆ ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಕಳೆದೊಂದು ವಾರದಿಂದ ಈ ಕ್ಷೇತ್ರದಿಂದ ಎನ್ ಡಿಎ ಅಭ್ಯರ್ಥಿ ಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಕ್ಕೆ ಇದರೊಂದಿಗೆ ತೆರೆ ಬಿದ್ದಿದೆ ಜೊತೆಗೆ ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕಾರಣದಲ್ಲಿ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕನ ಜೊತೆ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಹಲವು ಸಮೀಕ್ಷೆಗಳನ್ನು ಮಾಡಿಸಿಕೊಂಡಿದ್ದರು.
ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪಟ್ಟು ಹಿಡಿದಿದ್ದ ಕಾರಣ ಅಭ್ಯರ್ಥಿ ಘೋಷಣೆ ವಿಳಂಬವಾಗಿತ್ತು ಯೋಗೇಶ್ವರ್ ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ತಮ್ಮ ಪುತ್ರನಿಗೆ ಸಂಕಷ್ಟ ಉಂಟಾಗಲಿದೆ ಎಂದು ಭಾವಿಸಿದ್ದ ಕುಮಾರಸ್ವಾಮಿ ಕೊನೆಯ ಹಂತದವರೆಗೆ ಕಾದು ನೋಡಲು ತೀರ್ಮಾನಿಸಿದ್ದರು.
ಬಿಜೆಪಿ ತಮಗೆ ಟಿಕೆಟ್ ನೀಡುವುದಿಲ್ಲ ಎಂಬುದು ಖಾತ್ರಿ ಆದ ನಂತರ ಯೋಗೇಶ್ವರ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರ ಕುಮಾರಸ್ವಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದು ಇದೀಗ ತಮ್ಮ ಪುತ್ರನನ್ನು ಅಧಿಕೃತವಾಗಿ ಹಣ ಕೇಳಿಸುವುದಾಗಿ ಪ್ರಕಟಿಸಿದ್ದಾರೆ.
ಅಭ್ಯರ್ಥಿ ಘೋಷಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲಿ ಉಭಯ ಪಕ್ಷಗಳ ಮುಖಂಡರು ಸುಧೀರ್ಘ ಮಾತುಕತೆ ನಡೆಸಿದರು ಇದರ ನಡುವೆಯೇ ಮಾಜಿ ಪ್ರಧಾನಿ ದೇವೇಗೌಡ ತಮ್ಮ ಮೊಮ್ಮಗನ ಸ್ಪರ್ಧೆ ಘೋಷಿಸಿದರು.
ಅಷ್ಟೇ ಅಲ್ಲ ಇದು ತಮ್ಮದೇ ಚುನಾವಣೆ ಎಂದು ಕೆಲಸ ಮಾಡುತ್ತೇನೆ ಚುನಾವಣೆ ಮುಗಿಯುವವರೆಗೆ ಚನ್ನಪಟ್ಟಣ ಬಿಟ್ಟು ಕದಲುವುದಿಲ್ಲ ತಮಗೆ ದ್ರೋಹ ಮಾಡಿದವರಿಗೆ ಈ ಚುನಾವಣೆ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು.