ಬೆಂಗಳೂರು, ಅ.6:
ದೇಶದ ಬೇರೆ ರಾಜ್ಯಗಳಲ್ಲಿ ಕಾಫ್ ಸಿರಫ್ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾದೆ. ಎಲ್ಲಾ ಮಾದರಿಯ ಕಾಪ್ ಸಿರಪ್ ಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಮ್ಮಿನ ಔಷಧಿ ಮಾತ್ರವಲ್ಲ ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಎಲ್ಲ ರೀತಿಯ ಔಷಧಿಗಳ ಗುಣಮಟ್ಟದ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ ಎಲ್ಲಿಯೂ ಕೂಡ,ಕಳಪೆ ಕಾಫ್ ಸಿರಫ್ ಕರ್ನಾಟಕ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮುನ್ನೆಚ್ವರಿಕೆ ಕ್ರಮವಾಗಿ ಎಲ್ಲಾ ಕಂಪನಿಗಳ ಕಾಫ್ ಸಿರಫ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ರಾಜ್ಯದಲ್ಲಿಯ ಕಾಫ್ ಸಿರಫ್‌ಗಳ ಟೆಸ್ಟ್‌ಗೆ ಇಲಾಖೆ ಮುಂಜಾಗ್ರತ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಈ ಮೊದಲಿನಿಂದಲು ಔಷಧಿ ನಿಯಂತ್ರಣ ಇಲಾಖೆ ಎಚ್ಚರಿಕೆ ವಹಿಸಿದೆ. ಹೆಚ್ಚಿನ ಔಷಧಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದು, ಇದರಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ರಾಜ್ಯ ಆರೋಗ್ಯ ಇಲಾಖೆಯಿಂದ ಕಾಫ್ ಸಿರಫ್ ಬಳಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಬೇರೆ ಬೇರೆ ಕಂಪನಿಗಳ ಎಲ್ಲಾ ಕಾಫ್ ಸಿರಫ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕಾಫ್ ಸಿರಫ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅನಾಹುತ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಆರೋಗ್ಯ ಸಚಿವರು, ಔಷಧಿ ತಯಾರಿಕಾ ಘಟಕಗಳ ಬೇಜವಾಬ್ದಾರಿಯಿಂದಾಗಿ ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಪುದುಚೆರಿ ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಫ್ ಕುಡಿಸುವಾಗಲೂ ಪೋಷಕರು ಬಹಳ ಎಚ್ಚರಿಕೆ ವಹಿಸಬೇಕು. ಕಾಫ್ ಸಿರಫ್ ಸೇವನೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಕೆಲ ಔಷಧಿಗಳ ಕಲಬೆರಕೆ, ನಕಲಿ ಔಷಧಿ ಮತ್ತು ತಪಾಸಣೆ ಕುರಿತಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಯಾವುದೇ ಡ್ರಗ್ಸ್ ಕಲಬೆರಕೆ ಎಂದು ಗೊತ್ತಾದಲ್ಲಿ ತ್ವರಿತವಾಗಿ ದೇಶಾದ್ಯಂತ ಮಾಹಿತಿ ರವಾನೆ-ವಿನಿಮಯಕ್ಕೆ ಪ್ರತ್ಯೇಕ ʼವೆಬ್‌ಸೈಟ್ʼ ರಚಿಸುವಂತೆ ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದೆ. ಔಷಧಿಗಳ ಕಲಬೆರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಅಲ್ಲದೇ ರಾಜ್ಯ ರಾಜ್ಯಗಳ ನಡುವೆ ಮಾಹಿತಿ ಸಿಗುವಂತಹ ವ್ಯವಸ್ಥೆ ಜಾರಿಗೆ ತರುವತ್ತ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆರೋಗ್ಯ ಸಚಿವ ಗುಂಡೂರಾವ್ ಇದೇ ವೇಳೆ ಹೇಳಿದರು.