ಬೆಂಗಳೂರು, ಜು.28:
ವಾಲ್ಮೀಕಿ ಅಭಿವೃದ್ಧಿ ನಿಗಮದ ಕರ್ಮಕಾಂಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಕೇಂದ್ರ ಉಕ್ಕು ಖಾತೆ ಸಚಿವ ಕುಮಾರಸ್ವಾಮಿ ತಾವು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತೇನೆ ಎಂದು ಹೇಳಿದ್ದಾರೆ.
ಮೈಸೂರಿನ ಪುರಾಣಪ್ರಸಿದ್ಧ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ತಾವು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ನಾಯಕರು ಅವರಪ್ಪರಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಅದೇ ಅವಧಿಯಲ್ಲೇ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು. ಶೀಘ್ರದಲ್ಲಿಯೇ ತಾವು ಮುಖ್ಯಮಂತ್ರಿ ಆಗುವ ಅವಕಾಶವನ್ನು ದೇವರು ಕರುಣಿಸಲಿದ್ದಾನೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ರಾಮನಗರದ ಹೆಸರು ಬದಲಾವಣೆ ಮಾಡುವ ಅವಕಾಶ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿದ್ದಾರೆ. ಅವರು ಯಾವ ರೀತಿ ಪದಗಳನ್ನು ಬಳಕೆ ಮಾಡುತ್ತಾರೋ, ಆದಷ್ಟು ಬೇಗ ಅವು ಜಾರಿಗೆ ಬರುತ್ತವೆ. ತಮಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಶೀಘ್ರ ಬರಲಿದೆ ಎಂದಿದ್ದಾರೆ.ತಮಗೆ ಜನರ ಮತ್ತು ದೇವರ ಆಶೀರ್ವಾದ ಸಾಕು. ಡಿ.ಕೆ.ಶಿವಕುಮಾರ್ ಹಾಗೂ ಇತರರ ಆಶೀರ್ವಾದ ಬೇಡ ಎಂದು ಹೇಳಿದರು
Previous Articleಸಿದ್ದರಾಮಯ್ಯ ಅವರಿಗಿಂತ ಚಾಣಾಕ್ಷರಂತೆ ನಿರ್ಮಲಾ ಸೀತಾರಾಮನ್.
Next Article I.T.ಅಧಿಕಾರಿಗಳಂತೆ ಕಳ್ಳತನಕ್ಕೆ ಬಂದರು