ಶೃಂಗೇರಿ, ಜ.11:
ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
“ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ನನಗೆ ಯಾರ ಬೆಂಬಲವೂ ಬೇಡ. ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ಹೇಳಿದರು
ನಾನು ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು, ನಿತ್ಯ ಪೂಜೆ ಮಾಡುವವನು. ನನ್ನ ಒಳಿತು, ರಾಜ್ಯದ ಒಳಿತು, ನನ್ನ ನಂಬಿದವರ ಹಾಗೂ ಸಮಾಜದ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ. ಟೆಂಪಲ್ ರನ್ ಎಂದು ವ್ಯಾಖ್ಯಾನ ಮಾಡುವುದಾದರೆ ನೀವೆಲ್ಲ ಸೇರಿ ದೇವಾಲಯಗಳನ್ನು ಮುಚ್ಚಿಬಿಡಿ ಎಂದರು.
ಸರ್ಕಾರದಲ್ಲಿ ಮುಜರಾಯಿ ಇಲಾಖೆ, ವಕ್ಫ್ ಮಂಡಳಿ ಇರುವುದು ಏಕೆ? ಅವರವರ ವಿಚಾರ ಅವರವರ ನಂಬಿಕೆ. ಧರ್ಮ ಯಾವುದಾದರೂ ತತ್ವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ನಾಮ ಹಲವಾದರೂ ದೈವವೊಂದೇ. ದೇವನೊಬ್ಬ ನಾಮ ಹಲವು ಎಂದು ನಾನು ಪದೇ ಪದೆ ಹೇಳುತ್ತೇನೆ” ಎಂದು ತಿಳಿಸಿದರು.
ರಾಜಕೀಯವಾಗಿ ನನಗೆ ಯಾವುದೇ ತಿರುವಿನ ಅಗತ್ಯವಿಲ್ಲ. ಜನ ಆಶೀರ್ವಾದ ಮಾಡಿ ನಮಗೊಂದು ಅವಕಾಶ ಕೊಟ್ಟಿದ್ದಾರೆ. ಐದು ವರ್ಷ ಸರ್ಕಾರ ಮಾಡುತ್ತೇವೆ. ಪಕ್ಷ ಹೇಳಿದಂತೆ ನಾನು ಹಾಗೂ ಸಿಎಂ ಕೆಲಸ ಮಾಡುತ್ತೇವೆ. ಬೇರೆಯವರ ಮಾತುಗಳು ಗೌಣ” ಎಂದು ಹೇಳಿದರು
Previous ArticleC.T.ರವಿಗೆ ಬಂದ ಪತ್ರದಲ್ಲೇನಿದೆ ಗೊತ್ತಾ
Next Article ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಇವೆ ನೋಡಿ