ಬೆಂಗಳೂರು, ಜೂ.26:
ರಾಜ್ಯ ಸರ್ಕಾರವು ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ನಿರ್ಮಾಣ ಮಾಡುವ ಘೋಷಣೆ ಮಾಡಿದೆ.ಈ ನಿಟ್ಟಿನಲ್ಲಿ ಗೃಹ ಇಲಾಖೆಯು
ಡ್ರಗ್ಸ್ ಮಟ್ಟ ಹಾಕಲು ಸಮರವನ್ನೆ ಸಾರಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದೆ. ಸಂಪೂರ್ಣವಾಗಿ ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆಯು ಯುದ್ಧವನ್ನೇ ಸಾರಿದೆ. 40 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದ್ದು, 10 ಟನ್ ಗಾಂಜಾ ಸುಟ್ಟು ಹಾಕಲಾಗಿದೆ. ಇಷ್ಟೊಂದು ಪ್ರಮಾಣದ ಡ್ರಗ್ಸ್ ಯುವಕರ ಕೈ ಸೇರಿದ್ದರೆ ಎಷ್ಟು ಕುಟುಂಬಗಳು ಹಾಳಾಗುತ್ತಿದ್ದವೋ ಎಂದು ಆತಂಕ ವ್ಯಕ್ತಪಡಿಸಿದರು.
ಡ್ರಗ್ಸ್ ನಿಂದ ದೂರ ಇರುತ್ತೇವೆ ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡಿಕೊಳ್ಳಬೇಕು. ಐಟಿ ಕಂಪನಿಗಳು ಕೈಗಾರಿಕೆಗಳು ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವಾಗ 17 ರಿಂದ 20 ವರ್ಷದೊಳಗಿನವರೆ ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ತಪ್ಪಿತಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಮಾದಕ ವ್ಯಸನಿಯಾಗಿದ್ದರು ಎಂಬುದು ಗೊತ್ತಾಗುತ್ತಿದೆ. ಮಾದಕ ವ್ಯಸನದಿಂದ ಸಮಾಜಕ್ಕೆ ಅಪಾಯವಿದ್ದು, ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು ಎಂದು ಕರೆ ನೀಡಿದರು.
ಭಾರತವು ಮಾದಕ ವಸ್ತುಗಳ ಸಮಸ್ಯೆಯಲ್ಲಿ ಸಿಲುಕುತ್ತಿದೆ. 5 ಕೋಟಿ ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ” ಎಂದರು.
ಮಾದಕ ವ್ಯಸನ ಪಿಡುಗಾಗಿ ಪರಿಣಮಿಸಿದ್ದು,ಇದು ಯುವ ಸಮುದಾಯವನ್ನೇ ಹಾಳು ಮಾಡುತ್ತಿದೆ. ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆಯು 1987ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂ.26ರಂದು ಆಚರಿಸಲು ನಿರ್ಣಯಿಸಿತು ಎಂದು ಹೇಳಿದರು
Previous Articleಡಿ.ಕೆ.ಸೊಕ್ಕು ಮುರಿಯಲು ಸಿದ್ದರಾಮಯ್ಯ ತಂತ್ರ!
Next Article ಅಶೋಕ್ ಬಾಣ ಗುರಿಮುಟ್ಟಲಿದೆಯಾ..