ಬೆಂಗಳೂರು,ಜೂ.6-ಎರಡು ವರ್ಷಗಳಿಂದ ನಗರ ಪೊಲೀಸ್ ಆಯುಕ್ತರಾಗಿ ಹಲವು ಸವಾಲಿನ ಪ್ರಕರಣಗಳನ್ನು ನಿಭಾಯಿಸಿ ದಕ್ಷತೆ ಪ್ರಮಾಣಿಕತೆಯಿಂದ ಹಗಲು ರಾತ್ರಿ ಕೆಲಸ ಮಾಡಿದ ನಿಷ್ಠಾವಂತರಾಗಿದ್ದ ದಯಾನಂದ ಅವರನ್ನು ಅಮಾನತು ಮಾಡಿರುವುದಕ್ಕೆ ಪೊಲೀಸ್ ಅಧಿಕಾರಿಗಳು,ನಿವೃತ್ತ ಅಧಿಕಾರಿಗಳಿಂದ ಮಾತ್ರವಲ್ಲ,ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದೇ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಅದರಲ್ಲೂ ಗುಪ್ತದಳದಲ್ಲಿ ನಾಲ್ಕೈದು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿ ಸೂಕ್ಷ್ಮ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಯಶಸ್ವಿ ಕೆಲಸ ಮಾಡಿದ ದಯಾನಂದ ಅವರನ್ನು ಅಮಾನತುಮಾಡಿರುವುದು ಸರಿಯಲ್ಲ ಎನ್ನುವ ಖಂಡನೆ ವ್ಯಕ್ತವಾಗಿದೆ.
ದಯಾನಂದ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರಿದೆ,ಅವರ ಪ್ರಾಮಾಣಿಕತೆಯನ್ನು ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಪಕ್ಷಗಳ ಹಿರಿಯ ನಾಯಕರುಗಳು ಮೆಚ್ಚಿ ಮಾತನಾಡುತ್ತಾರೆ,ಆದರೆ ಅಂತಹ ಐಪಿಎಸ್ ಅಧಿಕಾರಿಗೆ ಅಮಾನತು ಬಹುಮಾನ ನೀಡಿರುವುದು ಅಧಿಕಾರಿಗಳ ಎದೆಗುಂದಿಸುವ ಕೆಲಸ ಎನ್ನಲಾಗಿದೆ.
ಲಜ್ಜೆ ಗೆಟ್ಟ ರಾಜಕಾರಣಿಗಳೇ ಇಷ್ಟು ಎಂದು ದೂರುವ ನಿವೃತ್ತ ಹಿರಿಯ ಪೊಲೀಸ್ ಐಪಿಎಸ್ ಅಧಿಕಾರಿಗಳು ತಮ್ಮ ಕುರ್ಚಿಯನ್ನು ಅಥವಾ ಅಧಿಕಾರವನ್ನು ಉಳಿಸಿಕೊಳ್ಳಲು ಹಿರಿಯ ಅಧಿಕಾರಿಗಳನ್ನು
ಈ ಬಲಿ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಚಾರದ ಹಿಂದೆ ಬಿದ್ದು ರಾಜ್ಯ ಸರ್ಕಾರ ಕೈಗೊಂಡ ಎಡವಟ್ಟಿನ ನಿರ್ಧಾರವನ್ನು ದಯಾನಂದ ಅವರು ವಿರೋಧಿಸಿದ್ದಾರೆ, ಮೆರವಣಿಗೆ ಮಾಡಲು ಅವರು ಅನುಮತಿ ನೀಡಿರಲಿಲ್ಲ ಅವರ ಸಲಹೆ ಸ್ವೀಕರಿಸಿದ್ದರೆ 11ಮಂದಿ ಸಾವು ಆಗುತ್ತಿರಲಿಲ್ಲ ಎನ್ನುವ ಹಿರಿಯ ಅಧಿಕಾರಿಗಳು ಅಂತಹ ನಿಷ್ಟುರ ಅಧಿಕಾರಿಯನ್ನು ಅಮಾನತು ಮಾಡಿರುವುದನ್ನು ಖಂಡಿಸಿದ್ದಾರೆ.
ಒತ್ತಡವಿದ್ದರೆ ವರ್ಗಾವಣೆ ಮಾಡಬಹುದಿತ್ತು,ಆದರೆ ಯಾರೋ ಮಾಡಿದ ತಪ್ಪಿಗೆ ದಯಾನಂದ್ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಯಾನಂದರವರು ಮೌಖಿಕವಾಗಿ “ವಿಕ್ಟರಿ ಪರೇಡ್” ತಕ್ಷಣಕ್ಕೆ ಬೇಡ ಎಂದು ವಿನಂತಿಸಿದರೂ ಮುಖ್ಯಮಂತ್ರಿ ಆಗಲಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಕೇಳಲಿಲ್ಲ ಎಂದು ಮಾಹಿತಿ ನಮಗಿದೆ ಇದನ್ನು ನ್ಯಾಯಾಲಯದಲ್ಲಿ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ರವರು ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ರಾಜ್ಯ ಮುಖ್ಯ ಕಾರ್ಯದರ್ಶಿ ಪೊಲೀಸ್ ಮಹಾನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು,ಅದನ್ನು ಬಿಟ್ಟು ಹಗಲು ರಾತ್ರಿ ಕೆಲಸ ಮಾಡಿದ ದಯಾನಂದ ಅವರ ಮೇಲೆ ಕ್ರಮ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದಯಾನಂದ ಅವರ ಅಮಾನತ್ತು ಆದೇಶ ಹಿಂಪಡೆದು ಕೆಲಸಕ್ಕೆ ಹಾಜರಾಗಲು ಸರ್ಕಾರ ಆದೇಶಿಸಬೇಕೆಂದು ನಿವೃತ್ತ ಐಪಿಎಸ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.
Previous Articleಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಸಲಿ ಕಾರಣ ಇಲ್ಲಿದೆ.
Next Article ಗಾಯಾಳು ಡಿಸಿಪಿ ಸೈದುಲ್ ಮಾಡಿದ ಕೆಲಸ ಗೊತ್ತಾ ?
