ಬೆಂಗಳೂರು,ಆ.31-
ನೆರೆಯ ತಮಿಳುನಾಡಿನ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಿದ್ದ ಹಿಜ್ಬ್ – ಉತ್ – ತಹ್ರೀರ್ ಪ್ರಕರಣದ ಶಂಕಿತ ಉಗ್ರನನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಜೀಜ್ ಅಹಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರನಾಗಿದ್ದಾನೆ. ಈತ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯನ್ನು ಆದರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಎನ್ಐಎ ತಿಳಿಸಿದೆ.
ಬಂಧಿತ ಶಂಕಿತ ಉಗ್ರಗಾಮಿ ಹಾಗೂ ಇಸ್ಲಾಂ ಮೂಲಭೂತ ಸಿದ್ಧಾಂತದಿಂದ ಪ್ರಭಾವಿತವಾಗಿ ಜಗತ್ತಿನ ಇಸ್ಲಾಮೀಕರಣ ಮತ್ತು ಇಸ್ಲಾಮಿಕ್ ಕಾನೂನು ಸ್ಥಾಪಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇಂತಹುದೇ ಆರೋಪದಲ್ಲಿ ಇತರೆ ಆರು ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಅವರ ಹೆಜ್ಜೆ ಜಾಡು ಬೆನ್ನು ಹತ್ತಿದ ಎನ್ಐಎ ತಂಡ ಹಲವರನ್ನು ಎಡೆಮುರಿ ಕಟ್ಟಿದೆ.
ಹಿಜ್ಬ್ -ಉತ್ – ತಹ್ರೀರ್‌ನ ಸಂಸ್ಥಾಪಕ ತಾಕಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸುವ ಗುರಿಯನ್ನು ಈ ಆರೋಪಿಗಳು ಹೊಂದಿದ್ದರು ಎಂಬ ಅಂಶವನ್ನು ವಿಚಾರಣೆ ಸಮಯದಲ್ಲಿ ಬಾಯಿ ಬಿಟ್ಟಿದ್ದಾರೆ
ಆರೋಪಿಗಳು ಅನೇಕ ಯುವಕರನ್ನು ಒಗ್ಗೂಡಿಸಿ ಹಿಜ್ಬ್ – ಉತ್-ತಹ್ರೀರ್‌ನ ಸಿದ್ಧಾಂತಗಳನ್ನು ಅವರ ತಲೆಗೆ ತುಂಬುವ, ಹಾಗೂ ತಮ್ಮ ಗುರಿ ಸಾಧಿಸಲು ಶತ್ರು ಶಕ್ತಿಗಳಿಂದ ಮಿಲಿಟರಿ ಸಹಾಯ (ನುಸ್ರಾ) ಪಡೆಯುವ ಶಿಬಿರಗಳನ್ನು (ಬಯಾನ್) ಸಂಘಟಿಸಿದ್ದರು.
ಅಂತಹ ರಹಸ್ಯ ಬಯಾನ್‌ಗಳನ್ನು ಸಂಘಟಿಸುವ ಪ್ರಮುಖ ಆರೋಪಿಗಳಲ್ಲಿ ಅಜೀಜ್ ಅಹಮದ್ ಸಹ ಓರ್ವನಾಗಿದ್ದ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಎನ್‌ಐಎ ತಿಳಿಸಿದೆ.