ಬೆಳಗಾವಿ,ಡಿ.19:
ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ತಮ್ಮನ್ನು ಅಶ್ಲೀಲ ಭಾಷೆ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರನ್ನು ಪರಿಷತ್ ಸದಸ್ಯತ್ವದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ
ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಸದಸ್ಯ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿ ಹೊರಟ್ಟಿ ಅವರನ್ನು ಭೇಟಿ ಮಾಡಿ ಬಿಜೆಪಿ ಸದಸ್ಯ ಸಿಟಿ ರವಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತ್ಯೇಕ ದೂರು ನೀಡಿದ್ದಾರೆ.
ಆನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪರಿಷತ್ತಿನಲ್ಲಿ ಆದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು. ಇದನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸದಸ್ಯ ಸಿಟಿ ರವಿ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಸಲಹೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸದಸ್ಯ ಸಿಟಿ ರವಿ ನೀಡಿರುವ ಹೇಳಿಕೆ ಅತ್ಯಂತ ಅಕ್ಷಮ್ಯ ಇದೊಂದು ಅಪರಾಧ ಪ್ರಕರಣವಾಗಿದೆ ಹೀಗಾಗಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಭಾಪತಿಗಳು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.
ಘಟನೆ ನಡೆದ ಸಮಯದಲ್ಲಿ ತಾವು ಸದನದಲ್ಲಿ ಇರಲಿಲ್ಲ ಆದರೆ ಎಲ್ಲ ಸದಸ್ಯರು ತಮಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ಇದು ಅಕ್ಷಮ್ಯ ಅಪರಾಧವಾಗಿದೆ ಹೀಗಾಗಿ ಕಾನೂನು ತನ್ನ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.
ಕೋಲಾಹಲ:
ವಿಧಾನ ಪರಿಷತ್ತಿನಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನವನ್ನು 2 ಬಾರಿ ಮುಂದೂಡಿದ್ದರು. 3ನೇ ಬಾರಿ ಸದನ ಸೇರಿದಾಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ಸಿಟಿ ರವಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದರು
ಆಗ ಮಧ್ಯಪ್ರವೇಶ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ‘ಕುಡಿದು ಕಾರು ಹತ್ತಿಸಿ ಕೊಲೆ ಮಾಡಿದ್ದೀರಿ’ ಎಂದು ಹೇಳಿದ ಮಾತು ಸದನದ ದಿಕ್ಕನ್ನು ತಪ್ಪಿಸಿತು. ‘ನಾನು ಕುಡಿಯುವುದಿಲ್ಲ. ಈ ರೀತಿ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಅದು ಆಕಸ್ಮಿಕ ಘಟನೆ’ ಎಂದರು.
ನೀವು ಈ ರೀತಿ ಮಾತನಾಡಿದರೆ ನನಗೂ ಕೂಡ ಮಾತನಾಡಲು ಬರುತ್ತದೆ ಎಂದು ಸರಿ ಇರುವುದಿಲ್ಲ ಎಂದು ಎಚ್ಚರಿಕೆ ಪದಗಳನ್ನು ಬಳಸಿದರು. ನಾನು ಕುಡಿದು ವಾಹನ ಮಾಡಿದ್ದೇನೆ ಎನ್ನುವುದಾದರೆ ಕಾಂಗ್ರೆಸ್ ನಾಯಕ ರಾಹುಲ್ ಡ್ರಗ್ ಅಡಿಕ್ಟ್” ಎಂದು ನೇರ ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು.
ಗದ್ದಲದ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಮಾತು ಮುಂದುವರೆಸಿದಾಗ ಕೆಂಡಾಮಂಡಲವಾದ ರವಿ, ಲಕ್ಷ್ಮೀಹೆಬ್ಬಾಳ್ಕರ್ ಕುರಿತು ಆಡಿದ ಮಾತು ಸದನದಲ್ಲಿ ಗದ್ದಲಕ್ಕೆ ಮುನ್ನುಡಿ ಬರೆಯಿತು. ಪರಸ್ಪರ ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಕಿತ್ತಾಡಿಕೊಂಡರಲ್ಲದೆ ಕೀಳುಮಟ್ಟದ ಭಾಷೆ ಪ್ರಯೋಗ ಮಾಡಿದರು. ಈ ಪದಪ್ರಯೋಗ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಿಸಿತು. ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಟ್ಟ ಸಭಾಪತಿ ಹೊರಟ್ಟಿ ಕಲಾಪವನ್ನು ಮತ್ತೆ ಕೆಲಕಾಲ ಮುಂದೂಡಿದರು.
ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಸಿ.ಟಿ.ರವಿ.
Previous Articleರಾಜ್ಯದಲ್ಲಿ 159 ಮಂದಿ ಬಾಂಗ್ಲಾ, ಪಾಕ್ ಪ್ರಜೆಗಳು.
Next Article ಚಳಿ ಬಿಡಿಸಿದ ಲೋಕಾಯುಕ್ತ.