ಜನವರಿ 15, 2023, ಭಾನುವಾರ ಬೆಳಗ್ಗೆ ನೆರೆರಾಷ್ಟ್ರವಾದ ನೇಪಾಳದ ಪೋಖರಾದಲ್ಲಿ ವಿಮಾನ ಅಪಘಾತವೊಂದು ಸಂಭವಿಸಿದೆ. ಮೂಲಗಳ ಪ್ರಕಾರ ದುರಂತಕ್ಕೀಡಾದ ATR 72 500 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 72 ಜನರೂ ಸಾವನ್ನಪ್ಪಿದ್ದಾರೆ. ಅದರಲ್ಲಿ 53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, 2 ಕೊರಿಯನ್ನರು, ಐರ್ಲ್ಯಾನ್ಡ್, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ನಿಂದ ತಲಾ ಒಬ್ಬರು ಹಾಗೂ 4 ಜನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.
ಯೇತಿ ಏರ್ಲೈನ್ಸ್ (Yeti Airlines) ಗೆ ಸೇರಿದ್ದ ಈ ವಿಮಾನ ಭಾನುವಾರ ಬೆಳಗ್ಗೆ, ದಿನದ ಮೂರನೇ ಹಾರಾಟವನ್ನು ಕಠ್ಮಂಡುವಿನಿಂದ ಆರಂಭಿಸಿ ಪೋಖರಾದೆಡೆಗೆ ಪ್ರಯಾಣ ಬೆಳೆಸಿತ್ತು. ಆದರೆ, ಟೇಕ್ ಆಫ್ ಆದ ಸುಮಾರು 20 ನಿಮಿಷದಲ್ಲಿ ಪೋಖರಾದ ಹೊಸ ವಿಮಾನ ನಿಲ್ದಾಣ ಮತ್ತು ಹಳೆಯ ವಿಮಾನ ನಿಲ್ದಾಣದ ನಡುವೆ ಇರುವ ಸೆಟಿ ನದಿಯ (Seti River) ಬಳಿ ಅಪಘಾತಕ್ಕೀಡಾಗಿದೆ.
ಯೇತಿ ಏರ್ಲೈನ್ಸ್ ಸುಮಾರು ೨೦ ವರ್ಷಗಳ ಹಳೆಯ ಏರ್ಲೈನ್ಸ್ ಕಂಪನಿ. ಇದುವರೆಗೆ ಸುಮಾರು 6 ATR ವಿಮಾನಗಳನ್ನು ಹೊಂದಿದೆ. ತಾರಾ ಏರ್ (Tara Air) ಎನ್ನುವ ಅವಳಿ ಕಂಪನಿಯೊಂದಿಗೆ ನೇಪಾಳದಾದ್ಯಂತ ಅತಿದೊಡ್ಡ ವಿಮಾನ ಮಾರ್ಗಗಳ ಜಾಲವನ್ನು ಯೇತಿ ಒದಗಿಸುತ್ತಿದೆ. ದುರಂತಕ್ಕೀಡಾದ ATR 72 500 ವಿಮಾನವು ಅವಳಿ ಇಂಜಿನ್ ಟರ್ಬೊ ಪ್ರಾಪ್ಗಳನ್ನು ಹೊಂದಿತ್ತು ಮತ್ತು 15 ವರ್ಷಗಳ ಹಾರಾಟದ ಅನುಭವವಿರುವ ವಿಮಾನವಾಗಿತ್ತು. Flightradar24 (flight tracking website) ನೀಡಿರುವ ಮಾಹಿತಿಯ ಪ್ರಕಾರ, ATR 72 500 ವಿಮಾನದಲ್ಲಿ ಬಳಸಲಾಗಿದ್ದ transponder (ರೇಡಿಯೋ ಸಿಗ್ನಲ್ ಗಳ ಮೂಲಕ ಸಂವಹನಕ್ಕೆ ಸಹಾಯವಾಗುವ ಯಂತ್ರ) ತುಂಬಾ ಹಳೆಯದಾಗಿತ್ತು ಮತ್ತು ನಿಖರವಾದ ಮಾಹಿತಿಯನ್ನು ನೀಡುತ್ತಿರಲಿಲ್ಲ.
ಸಾಮಾಜಿಕ ಜಾಲಾತಾಣಗಳಲ್ಲಿ ಈ ಘಟನೆಯ ವೀಡಿಯೊ ಒಂದು ಹರಿದಾಡುತ್ತಿದೆ. Experts ಗಳ ಪ್ರಕಾರ, ವೀಡಿಯೊದಲ್ಲಿ ಕಾಣಿಸುವ ಹಾಗೆ, ಲ್ಯಾನ್ಡ್ ಮಾಡುವ ವೇಳೆ ವಿಮಾನ ತುಂಬಾ ವೇಗವಾಗಿ ಚಲಿಸುತ್ತಿತ್ತು ಮತ್ತು ಪೈಲಟ್ ನ ನಿಯಂತ್ರಣ ತಪ್ಪಿತ್ತು ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಕಂಡು ಬರುವ ಈ ತಾಂತ್ರಿಕ ದೋಷಗಳು ದುರಂತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆಯಾದರೂ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲು ತಂಡವೊಂದನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.