ಬೆಂಗಳೂರು.ಆ,28
ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಧ್ಯಯನ ನಡೆಸಿ ಹೈಕಮಾಂಡ್ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶದ ಅನ್ವಯ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಆಹಾರ ಸಚಿವ ಕೆಎಚ್ ಮುನಿಯಪ್ಪ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ನಿಯೋಗದ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೈಯಕ್ತಿಕವಾಗಿ ನಾನು ಒಳ ಮೀಸಲಾತಿಯ ಪರವಾಗಿದ್ದೇನೆ ಆದರೆ ಈ ಬಗ್ಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಹೇಳಿದರು.
ಈ ವಿಷಯವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅಧ್ಯಯನ ನಡೆಸಬೇಕಾಗಿದೆ ಹೀಗಾಗಿ ಇದನ್ನು ಕಾನೂನು ತಜ್ಞರ ಅಭಿಪ್ರಾಯಕ್ಕೆ ಕಳುಹಿಸುತ್ತಿದ್ದೇನೆ ಆನಂತರ ಹೈಕಮಾಂಡ್ ಜೊತೆಗೂ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಒಳಮೀಸಲಾತಿ ವಿಚಾರವಾಗಿ ಹಲವು ದಿನಗಳಿಂದಲೂ ವಾದ-ವಿವಾದಗಳು ತೀವ್ರಗೊಂಡಿವೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿ ಚರ್ಚೆ ನಡೆಸಿ ವರದಿ ನೀಡಿತ್ತು. ಆದರೆ ಅದು ಅವೈಜ್ಞಾನಿಕ ಎಂಬ ಕಾರಣಕ್ಕೆ ಪ.ಜಾತಿಯಲ್ಲಿರುವ ಕೆಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು.
ಈ ಹಿಂದೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿರ್ಧಾರವನ್ನು ಕೈಗೊಂಡು ಅದಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಆದರೆ ಇದೀಗ ರಾಜ್ಯ ಸರ್ಕಾರಗಳೇ ನೇರವಾಗಿ ಇಂತಹ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಪಿನ ನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ
ಸಚಿವ ಮುನಿಯಪ್ಪ ನೇತೃತ್ವದ ನಿಯೋಗದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮಾಪುರ್, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಶಾಸಕರಾದ ಶ್ರೀನಿವಾಸ್, ಬಸವಂತಪ್ಪ, ಡಾ.ತಿಮಯ್ಯ, ಮಾಜಿ ಸಂಸದ ಶಿವಣ್ಣ ಸೇರಿದಂತೆ ಹಲವು ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.