ಬೆಂಗಳೂರು,ಡಿ.18:
ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೆಸ್ಟೋರೆಂಟ್, ಪಬ್, ರೆಸಾರ್ಟ್ ಗಳು ಹೊಸ ವರ್ಷಕ್ಕೆ ಹಲವಾರು ಕೊಡುಗೆಗಳನ್ನು ನೀಡಲು ಸಿದ್ದವಾಗಿವೆ.
ಎಂಜಿ ರೋಡ್, ಬ್ರಿಗೇಡ್ ರೋಡ್ ಕೋರಮಂಗಲದ ಪಬ್ಬು ಗಳಲ್ಲಿ ಪಾರ್ಟಿ ಮಾಡಿ, ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಹಲವಾರು ಸಜ್ಜಾಗಿದ್ದು ಟೇಬಲ್ ಬುಕ್ ಮಾಡಿದ್ದಾರೆ.
ಆದರೆ, ನೀವೇನಾದರು ಪಬ್ , ರೆಸಾರ್ಟ್ ರೆಸ್ಟೋರೆಂಟ್ ಗಳಲ್ಲಿ ಪಾರ್ಟಿ ಮಾಡಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಹೊರಗಡೆ ಓಡಾಡಿದರೆ ಪೊಲೀಸರ ಕೈಯಲ್ಲಿ ಲಾಕ್ ಆಗುವದು ಖಚಿತ.
ಹೊಸ ವರ್ಷದ ಸಂಭ್ರಮಕ್ಕಾಗಿ ಬೆಂಗಳೂರು ಸಜ್ಜಾಗುತ್ತಿರುವ ಬೆನ್ನಲ್ಲೇ ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೆ ಹಲವು ಕಡೆ ದಾಳಿ ಮಾಡಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ, ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ರಸ್ತೆಗಳಲ್ಲಿ ಸುತ್ತಾಡುವರನ್ನು ಪತ್ತೆ ಹಚ್ಚಲು ಪೊಲೀಸರು ತಪಾಸಣಾ ಕಿಟ್ವೊಂದನ್ನು ಖರೀದಿಸಿದ್ದಾರೆ.
ಈ ಕಿಟ್ ನಿಂದ ಕ್ಷಣಾರ್ಧದಲ್ಲೇ ಅಮಲಿನ ಪ್ರಮಾಣದ ಕುರಿತು ವರದಿ ಬರಲಿದೆ. ಈ ತಪಾಸಣಾ ಕಿಟ್ ಏಕಕಾಲದಲ್ಲಿ ಆರು ಟೆಸ್ಟಿಂಗ್ ರಿಪೋರ್ಟ್ ನೀಡುತ್ತದೆ. ಮೆತ್ ಆಂಫೆಟಮೈನ್, ಕೊಕೇನ್, ಓಪಿಐಓಡಿಎಸ್ ಸೇರಿದಂತೆ ಆರು ಮಾದಕ ದ್ರವ್ಯಗಳನ್ನು ತಪಾಸಣೆ ನಡೆಸಲಿದೆ. ಮಧ್ಯಪಾನ ಸೇರಿದಂತೆ ಗಾಂಜಾಸೇವನೆ, ಡ್ರಗ್ ಸೇವನೆ ವರದಿ ನೀಡಲಿದೆ.
ಹೊಸ ವರ್ಷ ಸಂಭ್ರಮಾಚರಣೆ ಒಂದು ವಾರಕ್ಕೂ ಮುಂಚೆಯೇ ತಪಾಸಣೆ ಆರಂಭಿಸಲಿದ್ದಾರೆ. ಅನುಮಾನ ಬಂದವರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಪ್ರಮುಖವಾಗಿ 21 ವರ್ಷದ ಒಳಗಿರುವ ಯುವಕ, ಯುವತಿಯರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 21 ವರ್ಷದ ಒಳಗಿನ ಯುವಕ, ಯುವತಿಯರು ಪಬ್ ಅಥವಾ ಬಾರ್ಗೆ ಪ್ರವೇಶಿಸಿದರೇ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.