ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲವನ್ನೇ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಮೆರಿಕಾ ತನಿಖಾ ಸಂಸ್ಥೆ ಎಫ್‍ಬಿಐ ಅಧಿಕಾರಿಗಳು ಕರ್ನಾಟಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ದಟ್ಟವಾಗಿದೆ.
ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿಯನ್ನು ಬೆನ್ನು ಹತ್ತಿ ಬಂದಿರುವ ಎಫ್ ಬಿಐ ತಂಡ ಆತನ ಸಂಪರ್ಕದಲ್ಲಿರುವ ಹಲವರ ಮಾಹಿತ ಸಂಗ್ರಹಿಸುತ್ತಿದೆ. ರಾಜ್ಯ ಪೊಲೀಸರಿಗೆ ಈ ಸಂಬಂಧ ಯಾವುದೇ ಮಾಹಿತಿ ನೀಡದಿರುವ ತನಿಖಾ ಸಂಸ್ಥೆ ತನ್ನದೇ ಆದ ಮೂಲಗಳ ಜಾಡು ಹಿಡಿದು ತನಿಖೆ ನಡೆಸುತ್ತಿದೆ.
ಶ್ರೀ ಕಿಯ ಬಿಟ್ ಕಾಯಿನ್ ಕರ್ಮಕಾಂಡದಲ್ಲಿ ರಾಜ್ಯದ ಕೆಲವು ಪ್ರಭಾವಿ ಹಾಗು ಆಯಕಟ್ಟಿನ ಹುದ್ದೆಯಲ್ಲಿರುವ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ವದಂತಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ನಡೆದಿರುವ ಈ ಬಿಟ್ ಕಾಯಿನ್ ಹಗರಣದ ಮೂಲ ಬೆಂಗಳೂರು ಎಂದು ಪತ್ತೆ ಹಚ್ಚಿದ್ದ ಎಫ್ ಬಿ ಐ ತಂಡ ಈ ಸಂಬಂಧ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿತ್ತು.ಕೇಂದ್ರದ ಸೂಚನೆ ಆಧರಿಸಿ ತನಿಖೆ ನಡೆಸಿದ ರಾಜ್ಯ ಪೊಲೀಸರಿಗೆ ಶ್ರೀಕಿ ಬಂಧನದ ವಿರಾಠ್ ಸ್ವರೂಪದ ದರ್ಶನವಾಗಿತ್ತು.ಇದೀಗ ಮತ್ತೆ ತನಿಖಾ ತಂಡ ಬೆಂಗಳೂರಿಗೆ ಬಂದಿದೆ ಎಂಬ ಮಾಹಿತಿ ಕೋಲಾಹಲವನ್ನೇ ಸೃಷ್ಟಿಸಿದೆ.
ಆದರೆ ಈ ರೀತಿಯ ಯಾವುದೇ ತನಿಖಾ ತಂಡ ಬೆಂಗಳೂರಿಗೆ ಬಂದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ನಾನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದೇನೆ. ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಲು ಯಾವುದೇ ಅಧಿಕಾರಿಗಳು ರಾಜ್ಯಕ್ಕೆ ಬಂದಿಲ್ಲ. ಇದು ಊಹಾಪೋಹ ಎಂದು ಹೇಳಿದ್ದಾರೆ.