ಬೆಂಗಳೂರು.
ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಬಣ್ಣಿಸಲ್ಪಡುತ್ತಿರುವ ಏಷ್ಯಾದ ಸಿಲಿಕಾನ್ ಸಿಟಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಗರಿ ಲಭಿಸಲು ವೇದಿಕೆ ಸಿದ್ಧಗೊಂಡಿದೆ.
ಮೂಲ ಸೌಕರ್ಯ ಸೃಷ್ಟಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ವಿಶೇಷ ಪ್ರಯತ್ನಗಳ ಪರಿಣಾಮವಾಗಿ ಮುಂಬರುವ 2030ರ ವೇಳೆಗೆ ಮಹಾನಗರ ಬೆಂಗಳೂರಿನಲ್ಲಿ ಮೂರು ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಮಾಡಲಿವೆ ಇದರಲ್ಲಿ ಎರಡು ವಿಮಾನ ನಿಲ್ದಾಣಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಕಾರ್ಯನಿರ್ವಹಿಸಿದರೆ, ಒಂದು ವಿಮಾನ ನಿಲ್ದಾಣ ಸಂಪೂರ್ಣವಾಗಿ ದೇಶಿಯ ವಿಮಾನ ಯಾನ ಚಟುವಟಿಕೆಗಳಿಗೆ ಮೀಸಲಾಗಿರಲಿದೆ.
ಸದ್ಯ ದೇವನಹಳ್ಳಿ ಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರ್ಷಿಕ 37.5 ಮಿಲಿಯನ್ ಪ್ರಯಾಣಿಕರು ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಪ್ರಮಾಣ 2030ರ ವೇಳೆಗೆ 90 ರಿಂದ 100 ಮಿಲಿಯನ್ ಗೆ ಹೆಚ್ಚಳವಾಗಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಂಕಿ ಅಂಶ ಮತ್ತು ಲೆಕ್ಕಾಚಾರಗಳು ಹೇಳುತ್ತವೆ.
ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಯಾಣಿಕರ ದಟ್ಟಣೆಯನ್ನು ಭರಿಸಲು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ ಎಂದು ಹೇಳಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಅಧಿಕಾರಿಗಳ ತಂಡ ಈಗಾಗಲೇ ಬೆಂಗಳೂರು ಸುತ್ತಮುತ್ತ ನಾಲ್ಕು ಪ್ರದೇಶಗಳನ್ನು ವೀಕ್ಷಿಸಿ ಅಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳ ಕುರಿತಂತೆ ಪರಿಶೀಲನೆ ನಡೆಸಿದೆ.
ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಮಿ ನೀರು ಸುಗಮ ರಸ್ತೆ ಸಂಚಾರ ಮತ್ತು ಪ್ರಯಾಣಿಕರ ದಟ್ಟಣೆ ಬಗ್ಗೆ ಪರಿಶೀಲನೆ ನಡೆಸಿರುವ ಈ ತಂಡ ಬೆಂಗಳೂರಿನ ದಕ್ಷಿಣ ಭಾಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದೆ, ಅಲ್ಲದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಾಲ್ಕು ಬಾರಿ ಸಭೆ ನಡೆಸಿದೆ.
ಕೇಂದ್ರ ವಿಮಾನ ಯಾನ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನ ದಕ್ಷಿಣ ಭಾಗದಿಂದ ಹೆಚ್ಚಿನ ಪ್ರಮಾಣದ ಜನರು ವಿಮಾನಯಾನ ಕೈಗೊಳ್ಳುತ್ತಿದ್ದಾರೆ ಅದರಲ್ಲೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುತ್ತಿರುವವರು ದೊಡ್ಡ ಪ್ರಮಾಣದಲ್ಲಿ ವಿಮಾನಯಾನ ಕೈಗೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಭಾಗದ ಜನರು ಉತ್ತರದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ ಆದ್ದರಿಂದ ದಕ್ಷಿಣ ಭಾಗಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವುದು ಸೂಕ್ತ ಎಂಬ ಒಮ್ಮತಾಭಿಪ್ರಾಯ ವ್ಯಕ್ತವಾಗಿದ್ದು ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಐಡೆಕ್ ಸಂಸ್ಥೆಗೆ ನೀಡಲಾಗಿದೆ. ಈ ವರದಿಯೊಂದಿಗೆ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಜನವರಿ 2ನೇ ವಾರದಲ್ಲಿ ಕೇಂದ್ರ ಮೂಲಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ.
ಬೆಂಗಳೂರು ದಕ್ಷಿಣ ಭಾಗಕ್ಕೆ ಸೇರಿದ ರಾಮನಗರ ಜಿಲ್ಲೆ ವ್ಯಾಪ್ತಿಯ ಸೂಕ್ತ ಪ್ರದೇಶದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮೂಲ ಸೌಕರ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನೂ ರಕ್ಷಣಾ ಸಂಸ್ಥೆಗೆ ಸೇರಿದ ಎಚ್ ಎ ಎಲ್ ವಿಮಾನ ನಿಲ್ದಾಣ ಕೂಡ 20030 ಕ್ಕೆ ಕಾರ್ಯ ನಿರ್ವಹಿಸಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಮಯದಲ್ಲಿ ಮಾಡಿಕೊಂಡ ಒಪ್ಪಂದ 2030 ಕ್ಕೆ ಅಂತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ 2030ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣ ಕೂಡ ಕಾರ್ಯ ಆರಂಭ ಮಾಡಲಿದ್ದು ಎಲ್ಲಿಂದ ಕೇವಲ ದೇಶಿಯ ವಿಮಾನಗಳು ಹಾರಾಟ ನಡೆಸಲಿವೆ.
ಈ ಮೂಲಕ ಬರುವ 2030ರ ವೇಳೆಗೆ ಬೆಂಗಳೂರಿಗೆ ಮೂರು ವಿಮಾನ ನಿಲ್ದಾಣಗಳು ಲಭಿಸಲಿವೆ
Previous Articleವಿಜಯೇಂದ್ರ ಬದಲಾವಣೆಗೆ ಪಟ್ಟು.
Next Article ಪೊಲೀಸರು ಲಾಕ್ ಮಾಡುತ್ತಾರೆ ಹುಷಾರ್.