ಬೆಂಗಳೂರು,ಜು.7-ನಗರದ ಪಬ್ ಮತ್ತು ಬಾರ್‌ಗಳಲ್ಲಿ ನಿಯಮ ಉಲ್ಲಂಘಿಸಿ ಯುವತಿಯರಿಗೆ ಅರೆಬರೆ ಬಟ್ಟೆ ತೊಡಿಸಿ ನೃತ್ಯಕ್ಕೆ ಕಡಿವಾಣ ಹಾಕುವ ಸಿಸಿಬಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಸಿಸಿಬಿ ಪೊಲೀಸರು ಇತ್ತೀಚೆಗೆ ನಗರದ ಕೆಲ ಪಬ್, ಬಾರ್‌ಗಳ ಮೇಲೆ ದಾಳಿ ನಡೆಸಿದ್ದಾಗ ಯುವತಿಯರು ಅರೆಬರೆ ಬಟ್ಟೆ ತೊಟ್ಟು ಗ್ರಾಹಕರಿಗೆ ಸರ್ವಿಸ್ ಮಾಡುತ್ತಿದ್ದ ಸಂಗತಿ ಬಯಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಆ ಪಬ್ ಮತ್ತು ಬಾರ್‌ಗಳ ಮೇಲೆ ಹಲವು ಬಾರಿ ದಾಳಿ ಮಾಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟರೂ ಈ ದಂಧೆ ನಿಂತಿಲ್ಲ.
ಈ ಕಾರಣಕ್ಕೆ ಪೊಲೀಸರು, ನಗರದ ಎಲ್ಲಾ ಬಾರ್ ಮತ್ತು ಪಬ್‌ಗಳಲ್ಲಿನ ಸಿ.ಸಿ ಕ್ಯಾಮೆರಾಗಳ ವಿಡಿಯೊ ತುಣುಕನ್ನು ಪ್ರತಿನಿತ್ಯ ಪರಿಶೀಲಿಸಲು ಮುಂದಾಗಿದ್ದಾರೆ. ಜತೆಗೆ, ಸಿ.ಸಿ ಕ್ಯಾಮೆರಾಗಳ ವಿಡಿಯೊವನ್ನು ಪ್ರತಿನಿತ್ಯ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡುವಂತೆ ಬಾರ್ ಹಾಗೂ ಪಬ್ ಮಾಲೀಕರಿಗೆ ಸೂಚಿಸಿದ್ದಾರೆ.
ಪೆನ್‌ಡ್ರೈವ್ ಅಥವಾ ಸಿಡಿಯಲ್ಲಿ ವಿಡಿಯೊ ಹಾಕಿ ಸಂಬಂಧಪಟ್ಟ ಠಾಣೆಗೆ ಕೊಡಬೇಕು ಎಂದು ಸೂಚಿಸಲಾಗಿದೆ.ಸಿ.ಸಿ ಕ್ಯಾಮೆರಾಗಳ ವಿಡಿಯೊ ಪರಿಶೀಲನೆ ವೇಳೆ, ಯುವತಿಯರಿಗೆ ಅರೆಬರೆ ತೊಡಿಸಿ ನೃತ್ಯ ಅಥವಾ ಸರ್ವಿಸ್ ಮಾಡಿಸಿರುವುದೂ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸಿರುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ಸಿಸಿಬಿ ಅಧಿಕಾರಿಗಳು ಬಾರ್ ಮತ್ತು ಪಬ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ರೆಸಾರ್ಟ್, ಹೋಂ ಸ್ಟೇಗಳಿಗೂ ವಾರ್ನಿಂಗ್‌ನಗರದ ಹೊರವಲಯದ ರೆಸಾರ್ಟ್, ಹೋಂ ಸ್ಟೇ ಹಾಗೂ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ರೇವ್ ಪಾರ್ಟಿ ಮತ್ತು ಡ್ರಗ್ಸ್ ಪಾರ್ಟಿ ಆಯೋಜನೆಯು ಸಾಮಾನ್ಯವಾಗಿದ್ದು, ಪೊಲೀಸರು ಇಂತಹ ಪಾರ್ಟಿಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಅದಕ್ಕೆ ಮಾಲೀಕರನ್ನೇ ಹೊಣೆ ಮಾಡಿ ಕಾನೂನು ಕ್ರಮ ಜರುಗಿಸುವುದಾಗಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಿ ಕಾನೂನು ಪಾಲನೆ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.
ಮಾದಕ ವಸ್ತುಗಳ ಸೇವನೆ, ಹೈಟೆಕ್ ವೇಶ್ಯಾವಾಟಿಕೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು. ಸಿ.ಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಇರಬೇಕು. ಅಗತ್ಯ ಸಂದರ್ಭಗಳಲ್ಲಿ ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಕೊಟ್ಟು ತನಿಖೆಗೆ ಸಹಕರಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ಬೆಂಗಳೂರಿನ ಎಲ್ಲಾ Bar Pub ಗಳ CCTV ಮೇಲೆ ಪೊಲೀಸ್ ಕಣ್ಣು.
Previous Articleಡಿಕೆ ಶಿವಕುಮಾರ್ ಬಗ್ಗೆ ರಂಭಾಪುರಿ ಶ್ರೀಗಳ ಹೇಳಿದ್ದೇನು ಗೊತ್ತೆ?
Next Article ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು