ಬೆಂಗಳೂರು,ಮೇ.5-
ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನು ಸೃಷ್ಟಿಸಿರುವ ಹಾಸನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಅಚ್ಚರಿಯ ನಿರ್ಧಾರಕ್ಕೆ ಬಂದಿದ್ದು, ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡದ ಕ್ರಮವನ್ನು ಸ್ವಾಗತಿಸಿದೆ.
ಮಾಜಿ ಸಚಿವ ಎಚ್ ಡಿ ರೇವಣ್ಣ ಪ್ರಕರಣದಲ್ಲಿ ತನಿಖಾ ತಂಡ ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಂಡಿದ್ದು ಅವರ ಬಂಧನ ಸ್ವಾಗತಾರ್ಹ ಕ್ರಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಂತ ಗಂಭೀರವಾದ ಆರೋಪಗಳು ಕೇಳಿ ಬಂದಿವೆ ಇದನ್ನು ಸರ್ಕಾರ ಕಠಿಣವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಆರೋಪ ಕೇಳಿ ಬಂದ ತಕ್ಷಣವೇ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವ ಜೆಡಿಎಸ್ ಕ್ರಮ ಅತ್ಯುತ್ತಮವಾಗಿದೆ ಒಂದು ವೇಳೆ ಪ್ರಜ್ವಲ್ ಹಾಸನದಲ್ಲಿ ಅವರು ವಿಜೇತರಾದರೂ ಅಮಾನತು ಆದೇಶವನ್ನು ಹಿಂಪಡೆಯದಂತೆ ಮನವಿ ಮಾಡುತ್ತೇವೆ. ತನಿಖೆ ಮುಗಿದು ನ್ಯಾಯಾಲಯದ ತೀರ್ಪು ಬರುವರೆಗೂ ಅಮಾನತು ಪ್ರಕರಣನ್ನು ವಾಪಸ್ ಪಡೆಯಬಾರದು. ಈ ನಿಲುವಿನಿಂದ ಕುಮಾರಸ್ವಾಮಿ ಹಿಂದೆ ಸರಿಯಬಾರದೆಂದು ಮನವಿ ಮಾಡಿದರು.
ಈ ಪ್ರಕರಣದಿಂದ ಫಲಿತಾಂಶದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸಿಗರು ಲಾಭ ಮಾಡಿಕೊಳ್ಳಲು ಹೊರಟಿದ್ದರು. ಮತದಾರರಿಗೆ ಇವರ ನಿಜವಾದ ಬಂಡವಾಳ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಏನೇ ಗ್ಯಾರಂಟಿ , ಮಣ್ಣುಮಸಿ ಎಂದುಕೊಂಡರೂ ಯಾವುದೇ ಕಾರಣಕ್ಕೂ ಅವರು ಎರಡಂಕಿ ದಾಟುವುದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಹತಾಶೆ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.
ಶಿಕ್ಷೆಯಾಗಬೇಕು:
ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕೆಂದು ಸ್ವತಃ ಕುಮಾರಸ್ವಾಮಿಯವರೇ ಹೇಳಿದ್ದಾರೆ. ಕಾನೂನಿಗೆ ತಲೆ ಬಾಗಿ ರೇವಣ್ಣ ಎಸ್‌ಐಟಿಗೆ ಶರಣಾಗಿದ್ದಾರೆ. ಮುಂದೆ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ ಎಂದರು.
ಇಂತಹ ಇಳಿ ವಯಸ್ಸಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನೋವು ತರಿಸುವ ಘಟನೆ ನಡೆದಿದ್ದು ತುಂಬಾ ಬೇಸರ ತಂದಿದೆ. ಆದಷ್ಟು ಬೇಗ ಸತ್ಯಾಂಶ ಹೊರಬರಬೇಕು. ಗೌಡರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವರು ತಮ್ಮ ಆರೋಗ್ಯದ ಕಡೆ ಗಮನಹರಿಸಲಿ ಎಂದು ಬಿಎಸ್‌ವೈ ಮನವಿ ಮಾಡಿದರು.