ಬೆಂಗಳೂರು
ರಾಜಕಾರಣಿಗಳು, ಅದರಲ್ಲೂ ಅಧಿಕಾರಸ್ಥ ರಾಜಕಾರಣಿಗಳು, ಪ್ರಯಾಣಿಸುವ ಮಾರ್ಗ ಮಧ್ಯೆ ರಸ್ತೆ ಅವಘಡದಲ್ಲಿ ಯಾರಾದರೂ ಸಿಲುಕಿದರೆ ಅವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದು ಪ್ರಚಾರದೊಂದಿಗೆ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಇಂತಹ ನೆರವಿಗೆ ಸಾಕಷ್ಟು ಪ್ರಚಾರ ಪಡೆದುಕೊಂಡರೂ ಜನತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವರ ಸಕಾಲಿಕ ನೆರವು ಮತ್ತು ಮಾನವೀಯತೆಯನ್ನು ಕೊಂಡಾಡುತ್ತಾರೆ.
ಆದರೆ ಇಲ್ಲೊಬ್ಬ ಸೆಲೆಬ್ರಿಟಿ ನಟ ತಾನು ಮಾಡಿದ ಸಹಾಯಕ್ಕೆ ಯಾವುದೇ ಪ್ರಚಾರ ಬಯಸದೆ, ಸಹಾಯ ಮಾಡಿ ಸದ್ದಿಲ್ಲದೆ ಹೋಗಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರ ಹೋದವರು ಭಾನುವಾರ ಸಂಜೆಯ ವೇಳೆಗೆ ಮತ್ತೆ ಬೆಂಗಳೂರಿಗೆ ವಾಪಾಸಾಗುವುದು ವಾಡಿಕೆ. ಹೀಗಾಗಿ ಹೊರ ಊರುಗಳಿಂದ ವಾಪಸ್ ಬರುವ ವೇಳೆ ನಗರ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಭಾನುವಾರ ಸಂಜೆ ನೆಲಮಂಗಲದ ಮೇಲ್ಸೇತುವೆಯಲ್ಲಿ ಇಂತಹದೇ ದಟ್ಟಣೆ ಇತ್ತು. ಇದರಲ್ಲಿ ನಾರಾಯಣ್ ಎಂಬುವ ಹಿರಿಯ ನಾಗರಿಕರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಕೆಟ್ಟು ನಿಂತಿತ್ತು. ಕಿರಿದಾದ ರಸ್ತೆಯಲ್ಲಿ ಕಾರು ಕೆಟ್ಟು ನಿಂತ ಪರಿಣಾಮ ಕಿರಿದಾದ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕೆಳಗೆ ಹೇಗೆ ಹೋಗಬೇಕೆಂದು ಗೊತ್ತಾಗದೆ ನಾರಾಯಣ್ ತಮ್ಮ ಕುಟುಂಬ ಸದಸ್ಯರೊಂದಿಗೆ ರಸ್ತೆ ಪಕ್ಕದಲ್ಲಿ ನಿಂತರೆ, ಇತರೆ ವಾಹನಗಳ ಸವಾರರು ಏನೆಂದು ಸೌಜನ್ಯಕ್ಕೂ ವಿಚಾರಿಸದೆ ಅವರನ್ನು ಮತ್ತು ನಿಂತಿರುವ ಕಾರನ್ನು ಕಂಡು ಎಲ್ಲರೂ ಕೆಂಗಣ್ಣು ಬೀರಿ ಹೋಗುತ್ತಿದ್ದರು.
ಈ ವೇಳೆ ಕೋಟಿಗೊಬ್ಬ ಸಿನಿಮಾದ ನಟ ಇರ್ಫಾನ್ ತನ್ನ ಸ್ನೇಹಿತರೊಂದಿಗೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರು. ತಕ್ಷಣ ತಮ್ಮ ಹೋಂಡಾ ಸಿಟಿ ಕಾರನ್ನು ನಿಲ್ಲಿಸಿದ ಅವರು ರಸ್ತೆಯಲ್ಲಿ ಆತಂಕದಲ್ಲಿ ನಿಂತಿದ್ದ ನಾರಾಯಣ್ ಅವರನ್ನು ವಿಚಾರಿಸಿ ಕೆಟ್ಟು ನಿಂತ ಕಾರಿನ ಪರಿಶೀಲನೆ ಮಾಡಿದರು. ಆ ಕಾರಿನ ಕ್ಲಚ್ ಪ್ಲೇಟ್ ತುಂಡಾಗಿತ್ತು. ಇದನ್ನು ಕಂಡ ಅವರು ಅದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಲ್ಲಿಸಿ, ಲಗೇಜ್ ಆಟೋದವರಿಂದ ಹಗ್ಗ ಪಡೆದು ತಮ್ಮ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಆ ಹಗ್ಗ ಕೂಡ ತುಂಡಾಗಿದೆ. ಆದರೂ ಧೃತಿಗೆಡದ ನಟ ಇರ್ಫಾನ್ ಕಾರನ್ನು ಸುಮಾರು ಒಂದೂವರೆ ಕಿಲೋಮೀಟರ್ ತಳ್ಳಿಕೊಂಡು ಬಂದು ಕಾರನ್ನು ಮೇಲ್ಸೇತುವೆಯಿಂದ ಕೆಳಗಿಳಿಸಿ, ನಂತರ ಆ ಕುಟುಂಬವನ್ನು ಬೇರೊಂದು ವಾಹನದಲ್ಲಿ ಮನೆಗೆ ಕಳುಹಿಸಿ ನಂತರ ತಮ್ಮ ಹಾದಿಯಲ್ಲಿ ಸಾಗಿದ್ದಾರೆ. ನಟನ ನೆರವನ್ನು ನಾರಾಯಣ್ ಕುಟುಂಬ ಕೊಂಡಾಡಿ ಧನ್ಯವಾದ ಅರ್ಪಿಸಿದೆ.