ಮೈಸೂರು,ಆ.22:
ನಿವೇಶನ ಹಂಚಿಕೆ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಕರ್ಮಕಾಂಡ ಸೇರಿದಂತೆ
ಹಗರಣಗಳು ರಾಜ್ಯ ಸರ್ಕಾರವನ್ನು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಶಾಸಕಾಂಗವನ್ನು ರಾಜ್ಯಪಾಲರು ಅಮಾನತಿನಲ್ಲಿ ಇರಿಸಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿಯೂ ಇದೇ ಕ್ರಮ ಕೈಗೊಳ್ಳಲಾಗಿತ್ತು. ನಂತರದಲ್ಲಿ ಚುನಾವಣೆ ನಡೆದು ಬಂಗಾರಪ್ಪ ಮುಖ್ಯಮಂತ್ರಿ ಆದರು’ ಎಂದು ನೆನಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನಡಿಯಲ್ಲಿ ಮುಡಾ ವಾಸನೆ ಜಾಸ್ತಿ ಆಗುತ್ತಿದೆ. ಮೈಸೂರಿನಲ್ಲಿ ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಮುಡಾ ಕಡತವನ್ನು ವೈಟ್ನರ್ ಹಾಕಿ ತಿದ್ದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಬೆಂಗಳೂರಿನಿಂದ ಹೆಲಿಕಾಪ್ಟರಿನಲ್ಲಿ ಮೈಸೂರಿಗೆ ಬಂದು ಕಡತ ಹೊತ್ತೊಯ್ದಿದ್ದಾರೆ. ಕಡತ ಕಳವು ಮಾಡಿದ್ದಕ್ಕೆ ಸಚಿವರ ಮೇಲೆ ಪ್ರಕರಣ ದಾಖಲಿಸಬೇಕು. ಈ ಹಿಂದಿನ ಇಬ್ಬರು ಆಯುಕ್ತರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಆಗ ಎಲ್ಲ ಪಕ್ಷದವರೂ ಸಿಕ್ಕಿಹಾಕಿಕೊಳ್ಳುತ್ತಾರೆ’ ಎಂದು ಹೇಳಿದರು.
ಈ ಎಲ್ಲಾ ವಿದ್ಯಮಾನಗಳ ಅರಿವಿರುವ ಲೋಕಾಯುಕ್ತ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಒತ್ತಾಯಿಸಿದರು.
Previous Articleರಾಜ್ಯಪಾಲರನ್ನು ಒತ್ತಡಕ್ಕೆ ಸಿಲುಕಿಸಿದ ಸರ್ಕಾರ
Next Article ರಾಜ್ಯ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕಂತೆ