ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದೆ. ಈ ಚುನಾವಣೆಯ ಫಲಿತಾಂಶ ದೇಶದ ರಾಜಕೀಯ ದಿಕ್ಕು ದಿಸೆಗಳನ್ನು ನಿರ್ಧರಿಸಬಲ್ಲ ಫಲಿತಾಂಶ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಈ ಹಿಂದೆ ನಡೆದ ಹಲವಾರು ರಾಜಕೀಯ ಪ್ರಯೋಗಗಳು ಮತ್ತು ಸ್ಥಿತ್ಯಂತರಗಳಿಗೆ ಕಾರಣವಾಗಿದ್ದು ಕರ್ನಾಟಕದ ರಾಜಕಾರಣ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಕೂಡ ಗಮನಿಸಲಾಗುತ್ತಿದೆ.
ಲೋಕಸಭೆ ಚುನಾವಣೆಗೂ ಮುನ್ನ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಎಂಬ ಹೊಸ ಪ್ರಯೋಗದ ಮೂಲಕ ಯಶಸ್ಸು ಸಾಧಿಸಿತು.
ಇದು ದೇಶದ ಇತರೆಡೆ ಪ್ರಯೋಗಕ್ಕೆ ನಾಂದಿಯಾಯಿತು. ತೆಲಂಗಾಣದಲ್ಲಿ ಗ್ಯಾರಂಟಿ ಕಾಂಗ್ರೆಸ್ ಕೈ ಹಿಡಿಯಿತು. ಇದರ ಪರಿಣಾಮವಾಗಿ ಬಿಜೆಪಿ ಕೂಡಾ ಗ್ಯಾರಂಟಿ ಮಂತ್ರ ಪಠಿಸಿತು.
ಇದರ ಬೆನ್ನಲ್ಲೇ ಬಿಜೆಪಿ ನೇತೃತ್ವ ಎನ್ ಡಿ ಎ ಮೈತ್ರಿಕೂಟದ ವಿರುದ್ಧ ಇಂಡಿಯಾ ಮೈತ್ರಿಕೂಟ ರಚನೆಯಾಗಿದ್ದು ಕೂಡ ಬೆಂಗಳೂರಿನಲ್ಲೇ
ಈ ದೃಷ್ಟಿಯಿಂದ ಗಮನಿಸಿದಾಗ ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹಲವಾರು ರೀತಿಯ ಬದಲಾವಣೆಗಳು ಮತ್ತು ಸ್ಥಿತ್ಯಂತರಗಳಿಗೆ ಕಾರಣವಾಗಲಿದೆ ಎಂದು ಹೇಳಬಹುದು.
ಪ್ರಮುಖವಾಗಿ ಈ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರ ಮತ್ತು ಬಿಜೆಪಿ ಸಂಘಟನೆಯ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಇದಕ್ಕಿಂತ ಹೆಚ್ಚಾಗಿ
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರಾಜ್ಯದ ಆಡಳಿತ ರೂಢ ಕಾಂಗ್ರೆಸ್ ಅಹಿಂದ ರಾಜಕೀಯ ಪ್ರಯೋಗದ ಮೂಲಕ ಗಮನ ಸೆಳೆಯುತ್ತಿದ್ದು ಅದನ್ನು ಕಟ್ಟಿಹಾಕಲು ಪ್ರಬಲ ಸಮುದಾಯದ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳುವ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿವೆ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ಮತ ಬ್ಯಾಂಕ್ ಹೊಂದಿರುವ ಬಿಜೆಪಿ ಉತ್ತರ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದೆಯಾದರೂ, ಹಳೆ ಮೈಸೂರು ಪ್ರದೇಶದಲ್ಲಿ ಅದು ಅಷ್ಟೊಂದು ಪ್ರಬಲವಾಗಿಲ್ಲ ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಸರಿಸಮಾನವಾಗಿ ಎದಿರೇಟು ನೀಡುತ್ತಿರುವ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪ್ರಯೋಗ ಮಾಡಿದೆ
ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನು ಹೊರತುಪಡಿಸಿ ನೋಡುವುದಾದರೆ ಈ ಚುನಾವಣೆಯ ಫಲಿತಾಂಶ ಮೈತ್ರಿಕೂಟದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಜೆಡಿಎಸ್ ಸ್ಪರ್ಧಿಸಿರುವ ಮೂರು ಕ್ಷೇತ್ರಗಳ ಪೈಕಿ ಕನಿಷ್ಠ ಎರಡರಲ್ಲಿ ಗೆಲುವು ಸಾಧಿಸಿದರೂ ಈ ಮೈತ್ರಿಕೂಟ ಮತ್ತಷ್ಟು ಗಟ್ಟಿಯಾಗಲಿದೆ ಒಂದು ವೇಳೆ ಜೆಡಿಎಸ್ ಸೋಲು ಕಂಡಲ್ಲಿ ಮೈತ್ರಿಕೂಟದ ಹಾದಿ ಬೇರೆ ದಿಕ್ಕಿನೆಡೆಗೆ ಸಾಗಲಿದೆ.
ಚುನಾವಣೆಯ ಫಲಿತಾಂಶ ಏನೇ ಆಗಲಿ ಜೆಡಿಎಸ್ ನ ದೊಡ್ಡ ಕಾರ್ಯಕರ್ತರ ಪಡೆ ಬಿಜೆಪಿ ಜೊತೆ ಸಾಗುವುದಂತೂ ಸತ್ಯ. ಉಳಿದ ಕೆಲವರು ಕಾಂಗ್ರೆಸ್ ಜೊತೆ ಹೋಗಲಿದ್ದು ಸ್ಥಳೀಯ ಅಗತ್ಯತೆಗಳನ್ನು ಆಧರಿಸಿ ಜೆಡಿಎಸ್ ನಲ್ಲೇ ಕೆಲವರು ಉಳಿದುಕೊಳ್ಳಲಿದ್ದಾರೆ ಹೀಗಾಗಿ ಜೆಡಿಎಸ್ ಗೆ ಈ ಚುನಾವಣೆಯ ಫಲಿತಾಂಶ ಅಳಿವು ಉಳಿವಿನ ವಿಷಯವಾಗಲಿದೆ .
ಇದರ ಹೊರತಾಗಿ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ನಿಜ ಅರ್ಥದಲ್ಲಿ ಅಳಿವು ಉಳಿವಿನ ಚುನಾವಣೆ ಎಂದೇ ಹೇಳಲಾಗುತ್ತಿದೆ.ಕಾಂಗ್ರೆಸ್ ಅತ್ಯಂತ ಕಳಪೆ ಸಾಧನೆ ಮಾಡಿದರೆ ಸರ್ಕಾರದಲ್ಲಿರುವ ಸಿದ್ದರಾಮಯ್ಯ ವಿರೋಧಿ ಬಣ ಮುಖ್ಯಮಂತ್ರಿ ತಲೆದಂಡಕ್ಕೆ ಪಟ್ಟು ಹಿಡಿಯಬಹುದು. ಇದಕ್ಕೆ ಪ್ರತಿಯಾಗಿ ಸಿಎಂ ಬಣ ಉಪ ಮುಖ್ಯಮಂತ್ರಿ ವಿರುದ್ಧ ಸಮರ ಘೋಷಿಸಬಹುದು.ಕೆಲವು ಮಂತ್ರಿಗಳ ತಲೆದಂಡವನ್ನೂ ತಳ್ಳಿ ಹಾಕುವಂತಿಲ್ಲ.ಇಂತಹ ಬೆಳವಣಿಗೆಯ ನಡುವೆ ನೆರೆ ಮಹಾರಾಷ್ಟ್ರದಲ್ಲಿ ನಡೆದಂತಹ ಕ್ಷಿಪ್ರ ರಾಜಕೀಯ ಬದಲಾವಣೆಗಳೂ ನಡೆದು ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಬಹುದು. ಇದು ಒಟ್ಟಾರೆಯ ಲೆಕ್ಕಾಚಾರವಾದರೆ ಕೆಲವು ಲೋಕಸಭಾ ಕ್ಷೇತ್ರದ ಫಲಿತಾಂಶ ಕೂಡಾ ಹಲವು ಬದಲಾವಣೆಗಳಿಗೆ ನಾಂದಿ ಹಾಡಬಹುದು
ಕಲಬುರ್ಗಿ ಏನಾಗಲಿದೆ:
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರ್ಗಿ ಲೋಕಸಭೆ ಚುನಾವಣೆ ಫಲಿತಾಂಶ ಖರ್ಗೆ ಅವರಿಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಖರ್ಗೆ ಕಳೆದ ಚುನಾವಣೆಯಲ್ಲಿ ಸೋತ ಪರಿಣಾಮ ಹಿಂಬಾಗಿಲ ರಾಜಕಾರಣದ ಮೂಲಕ ರಾಜ್ಯಸಭೆ ಪ್ರವೇಶಿಸುವಂತಾಯಿತು.
ಈ ಚುನಾವಣೆಯಲ್ಲಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿದ್ದು ತಮ್ಮ ಎಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಚುನಾವಣೆ ಎದುರಿಸಿದ್ದಾರೆ ಇವರಿಗೆ ಬೆಂಗಾವಲಾಗಿ ನಿಂತಿದ್ದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಇವರ ಪುತ್ರ ಪ್ರಿಯಾಂಕ್ ಖರ್ಗೆ .ಈ ಚುನಾವಣೆಯ ಫಲಿತಾಂಶ ಏರುಪೇರಾದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಅವರ ರಾಜಕೀಯ ಭವಿಷ್ಯವೂ ಕೂಡ ಮಸುಕಾಗಲಿದೆ
ಹೃದಯ ಗೆಲ್ಲುವುದೇ ಬಂಡೆ:
ಕಲಬುರ್ಗಿಯಂತೆ ಮತ್ತೊಂದು ಗಮನ ಸೆಳೆದಿರುವ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರ.ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಬಲವಾಗಿ ಬೀಸಿದ ಮೋದಿ ಅಲೆಯ ನಡುವೆಯೂ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಡಿ.ಕೆ. ಸುರೇಶ್ ಈ ಚುನಾವಣೆಯಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನಲಾದ ಈ ಚುನಾವಣೆ ಫಲಿತಾಂಶ ಎಲ್ಲಾ ರಾಜಕೀಯ ಆಸಕ್ತರ ಗಮನ ಸೆಳೆದಿದೆ.ಇಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಡಿಕೆ ಶಿವಕುಮಾರ್ ಉನ್ನತ ಹುದ್ದೆಗೆ ಇರುವ ತಮ್ಮ ಕನಸನ್ನು ಇನ್ನು ಕೆಲವು ಕಾಲ ಅದುಮಿಡಬೇಕಾದ ಅನಿವಾರ್ಯತೆ ಎದುರಾಗಲಿದೆ ಹಾಗೆಯೇ ಯಶಸ್ವಿ ವೈದ್ಯರಾಗಿರುವ ಡಾ. ಮಂಜುನಾಥ್ ರಾಜಕೀಯವಾಗಿಯೂ ಯಶಸ್ಸು ಸಾಧಿಸುವ ಜೊತೆಗೆ ಜಿಲ್ಲೆಯ ಮೇಲೆ ಕುಮಾರಸ್ವಾಮಿ ಪ್ರಾಬಲ್ಯ ಸಾಬೀತಾಗಲಿದೆ.
ಒಂದು ವೇಳೆ ಡಿಕೆ ಸುರೇಶ್ ಗೆಲುವು ಸಾಧಿಸಿದರೆ ಮಂಜುನಾಥ್ ಅವರು ಬಿಜೆಪಿಯಲ್ಲಿ ಉಳಿಯುವುದು ಕಷ್ಟ.ಅಲ್ಲದೇ ಕುಮಾರಸ್ವಾಮಿ ಕೂಡಾ ದೊಡ್ಡ ಹಿನ್ನಡೆ ಅನುಭವಿಸಲಿದ್ದಾರೆ. ಕಾಂಗ್ರೆಸ್ ನ ಈ ಗೆಲುವು ರಾಜ್ಯ ರಾಜಕಾರಣದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರಲಿದೆ.
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರಿಗೆ ಬೆಂಗಾವಲಾಗಿ ನಿಲ್ಲಲಿರುವ ಡಿಕೆ ಸುರೇಶ್ ಮುಂದಿನ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಲಿದ್ದಾರೆ ತಮ್ಮ ಸೋದರನನ್ನು ಉನ್ನತ ಹುದ್ದೆಯ ಕೂರಿಸಲು ಇವರು ಹಾಕುವ ಪಟ್ಟುಗಳು ದೊಡ್ಡ ರೀತಿಯ ಪರಿಣಾಮ ಬೀರಲಿವೆ.
ಕುಟುಂಬದ ವರ್ಚಸ್ಸು:
ಇದೇ ರೀತಿಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಪಾಲಿಗೆ ಅಗ್ನಿಪರೀಕ್ಷೆಯ ಕ್ಷೇತ್ರವಾಗಿದೆ. ಇಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸೋದರ ಬಿ ವೈ ರಾಘವೇಂದ್ರ ಮತ್ತೊಂದು ಅವಧಿಗೆ ಸಂಸದರಾಗುವ ಕನಸಿನೊಂದಿಗೆ ಕಣಕ್ಕಿಳಿದಿದ್ದಾರೆ.
ಈ ಚುನಾವಣೆಯಲ್ಲಿ ರಾಘವೇಂದ್ರ ಗೆಲುವು ಸಾಧಿಸಿದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಬಿಜೆಪಿಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಯಾವುದೇ ಗೊಂದಲ ಮತ್ತು ಅಪಸ್ವರಗಳಿಗೆ ಅವಕಾಶವಿಲ್ಲದೆ ವಿಜಯೇಂದ್ರ ಮುಂದುವರೆಯುತ್ತಾರೆ. ಹಾಗೆಯೇ ಈ ಕುಟುಂಬದ ವಿರುದ್ಧ ಸಮರ ಘೋಷಿಸಿರುವ ಹಿರಿಯ ನಾಯಕ ಈಶ್ವರಪ್ಪ ನೇಪಥ್ಯಕ್ಕೆ ಸರಿಯಲಿದ್ದಾರೆ.
ಒಂದು ವೇಳೆ ಫಲಿತಾಂಶದಲ್ಲಿ ಏರುಪೇರಾದರೆ ಯಡಿಯೂರಪ್ಪ ಅವರ ಕುಟುಂಬ ಬಿಜೆಪಿಯಲ್ಲಿ ಮೂಲೆಗುಂಪಾಗಲಿದೆ. ಈಶ್ವರಪ್ಪ ಹಾಗೂ ಇತರ ಅವರ ವಿರೋಧಿಗಳು ಬಿಜೆಪಿಯಲ್ಲಿ ಪ್ರಬಲರಾಗಲಿದ್ದಾರೆ.ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯಬೇಕಾದ ಅನಿವಾರ್ಯತೆ ಉಂಟಾದಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ.
ಮಹಾರಾಜನ ಭವಿಷ್ಯ:
ಮೈಸೂರು ಲೋಕಸಭಾ ಕ್ಷೇತ್ರದ ಫಲಿತಾಂಶ
ಕೂಡ ರಾಜ ರಾಜಕಾರಣದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಪ್ರತಿಷ್ಠೆಯನ್ನು ಪಣಕಿಟ್ಟು ಚುನಾವಣೆ ಎದುರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಣ್ ಅವರನ್ನು ಗೆಲ್ಲಿಸುವುದು ಸಿದ್ಧರಾಮಯ್ಯ ಅವರಿಗೆ ಅನಿವಾರ್ಯವಾಗಿತ್ತು ಒಂದು ವೇಳೆ ಈ ಚುನಾವಣೆಯಲ್ಲಿ ಅವರು ಮುಗ್ಗರಿಸಿದರೆ ಸಿದ್ದರಾಮಯ್ಯ ಅವರೂ ಕೂಡ ಸಾಕಷ್ಟು ತೊಂದರೆಗೆ ಸಿಲುಕಲಿದ್ದಾರೆ.
ಹಾಗೆಯೇ ರಾಜವಂಶಸ್ಥ ಯದುವೀರ್ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಇವರು ಗೆಲುವು ಸಾಧಿಸಿದರೆ ಮತ್ತೊಮ್ಮೆ ಮೈಸೂರಿನ ಜನತೆ ರಾಜ ವಂಶಸ್ಥರ ಮೇಲೆ ಹೊಂದಿರುವ ಗೌರವ ಸಾಬೀತಾಗಲಿದೆ ಇದೇನಾದರೂ ವ್ಯತ್ಯಾಸವಾದಲ್ಲಿ ರಾಜ ಮನೆತನದ ಆಂತರಿಕ ಕಲಹ ಕೂಡ ಬಹಿರಂಗವಾಗಲಿದೆ. ರಾಜಕೀಯವಾಗಿ ಯದುವೀರ್ ನೇಪಥ್ಯ ಸೇರಬಹುದು.
ಮಂತ್ರಿಗಳ ಭವಿಷ್ಯ ಪಣದಲ್ಲಿ:
ಇನ್ನು ಈ ಚುನಾವಣೆಯ ಫಲಿತಾಂಶ ಪ್ರಮುಖವಾಗಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಕೆ. ಎಚ್. ಮುನಿಯಪ್ಪ, ಹೆಚ್ ಸಿ ಮಹಾದೇವಪ್ಪ ಮತ್ತು ಈಶ್ವರ ಕಂಡ್ರೆ ಅವರಿಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ ಮುನಿಯಪ್ಪ ಅವರನ್ನು ಹೊರತುಪಡಿಸಿ ಉಳಿದವರು ಈ ಚುನಾವಣೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಗೆಲ್ಲಿಸಿ ಕೊಂಡು ಬರುವ ಶಪಥ ಮಾಡಿದ್ದಾರೆ.
ಬೆಳಗಾವಿ ಅಧಿಪತ್ಯ:
ಇದರಲ್ಲಿ ಮುಂಬೈ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ ಮತ್ತು ಕಾರವಾರ ಲೋಕಸಭಾ ಕ್ಷೇತ್ರದ
ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.ಇಲ್ಲಿನ ಕಾಂಗ್ರೆಸ್ ಗೆಲುವು ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹೊಂದಿರುವ ಬಿಗಿ ಹಿಡಿತ ಮತ್ತಷ್ಟು ಗಟ್ಟಿಯಾಗಲಿದೆ. ಇವರ ನಾಯಕತ್ವದ ಕುರಿತು ಅಲ್ಲಲ್ಲಿ ಕೇಳಿಬರುತ್ತಿರುವ ಅಪಸ್ವರ ದೂರಾಗಲಿದೆ. ಸತೀಶ್ ಅವರ ಅದುಮಿಟ್ಟುಕೊಂಡಿರುವ ಮುಖ್ಯಮಂತ್ರಿ ಹುದ್ದೆಯ ಕನಸು ನನಸಾಗಿಸುವ ಪ್ರಯತ್ನಗಳು ವೇಗ ಪಡೆಯಲಿವೆ. ಅದೇ ರೀತಿ ತಮ್ಮ ಪುತ್ರನ ಗೆಲುವಿನ ಜೊತೆಗೆ,ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಇನ್ನಷ್ಟು ಪ್ರಭಾವಿಯಾಗಲಿದ್ದಾರೆ
ಅದೇ ರೀತಿಯಲ್ಲಿ ಬಿಜೆಪಿಯಲ್ಲೂ ಕೂಡ ಸಾಕಷ್ಟು ಬದಲಾವಣೆಗಳಾಗಲಿವೆ. ಬಣ ರಾಜಕಾರಣದ ಒಳ ಸುಳಿಗಳು ಬಹಿರಂಗವಾಗಲಿವೆ. ಬಿಜೆಪಿಯ ಕೆಲವು ನಾಯಕರು ಪಕ್ಷಾಂತರ ಮಾಡಿದರೂ ಕೂಡ ಆಶ್ಚರ್ಯ ಇಲ್ಲ
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಹಿನ್ನಡೆ ಅನುಭವಿಸಿದರೆ, ರಾಜಕೀಯವಾಗಿ ಅವರು ನೇಪಥ್ಯಕ್ಕೆ ಸರಿಯಲಿದ್ದಾರೆ. ಕಾರವಾರದಲ್ಲಿ ಅಂಜಲಿ ನಿಂಬಾಳ್ಕರ್ ಗೆಲುವು ಸಾಧಿಸಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ತಮ್ಮನ್ನು ನಿರ್ಲಕ್ಷ್ಯ ಮಾಡಿದ ಬಿಜೆಪಿ ಹೈಕಮಾಂಡ್ ಗೆ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲಿದ್ದಾರೆ ಒಂದು ವೇಳೆ ಕಾಂಗ್ರೆಸ್ ಇಲ್ಲಿ ಸೋಲು ಅನುಭವಿಸಿದರೆ ಅನಂತಕುಮಾರ್ ಹೆಗಡೆ ಅವರ ರಾಜಕೀಯ ಭವಿಷ್ಯ ಬಹುತೇಕ ಅಂತ್ಯವಾದಂತಾಗಲಿದೆ.
ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕೂಡ ಗಮನ ಸೆಳೆದಿದೆ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದರೆ ಕೇಂದ್ರ ಬಿಜೆಪಿಯಲ್ಲಿ ಪ್ರಾತಿನಿಧ್ಯ ಪಡೆಯಲಿದ್ದಾರೆ. ಸೋಲು ಅನುಭವಿಸಿದರೆ ಕೇವಲ ಶಾಸಕ ಸ್ಥಾನಕ್ಕೆ ಸೀಮಿತವಾಗಲಿದ್ದಾರೆ.
ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಗೆಲುವು ಸಾಧಿಸಿದರೆ ಬಿಜೆಪಿಯಲ್ಲಿ ಇನ್ನಷ್ಟು ಪ್ರಭಾವಿಯಾಗಲಿದ್ದಾರೆ ಅಷ್ಟೇ ಅಲ್ಲ ರಾಜ್ಯ ಬಿಜೆಪಿ ಮೇಲೂ ಹಿಡಿತ ಸಾಧಿಸಲಿದ್ದಾರೆ. ಒಂದು ವೇಳೆ ಸೋಲು ಅನುಭವಿಸಿದರೆ ಅವರ ವಿರೋಧಿಗಳೆಲ್ಲ ಒಟ್ಟಾಗಿ ಮುಗಿ ಬೀಳುವ ಮೂಲಕ ಅವರು ಸಾಕಷ್ಟು ಮುಜುಗರ ಮತ್ತು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.
ಇಂತಹುದೇ ಮತ್ತೊಂದು ಕ್ಷೇತ್ರ ತುಮಕೂರು ಇಲ್ಲಿ ಇಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ನ ಮುದ್ದ ಹನುಮೇಗೌಡ ಮತ್ತು ಬಿಜೆಪಿಯ ವಿ ಸೋಮಣ್ಣ ಅವರಿಗೆ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ ಗೆಲ್ಲುವವರು ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿದರೆ ಸೋತವರು ನಿಶ್ಚಿತವಾಗಿ
ತೆರೆಮರೆಗೆ ಸರಿಯಲಿದ್ದಾರೆ.
ಇದೆಲ್ಲಾ ಒಂದು ಲೆಕ್ಕಾಚಾರವಾದರೆ ಸಾಕಷ್ಟು ಭಿನ್ನಮತದ ನಡುವೆಯೂ ತಮ್ಮ ಪುತ್ರಿಯನ್ನು ಕಣಕ್ಕಿಳಿಸಿರುವ ಶಿವಾನಂದ ಪಾಟೀಲ್ ಅವರ ಮಂತ್ರಿ ಸ್ಥಾನ ಪುತ್ರಿಯ ಸೋಲು ಗೆಲುವನ್ನು ಅವಲಂಬಿಸಿದೆ ಹಾಗೆಯೇ ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆಲುವು ಮಹಾದೇವಪ್ಪ ಅವರ ಮಂತ್ರಿ ಸ್ಥಾನವನ್ನು ನಿರ್ಣಯಿಸಲಿದೆ.
ಒಟ್ಟಾರೆಯಾಗಿ ದೇಶದ ಗಮನ ಸೆಳೆದಿರುವ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಒಂದು ಫಲಿತಾಂಶ ಹಲವಾರು ರಾಜಕೀಯ ಬದಲಾವಣೆಗಳಿಗೆ ಲೆಕ್ಕಾಚಾರಗಳು ಆಂತರಿಕ ವಿದ್ಯಮಾನಗಳು ಬಹಿರಂಗ ವಾಕ್ಸಮರಗಳಿಗೆ ವೇದಿಕೆಯಾಗುವುದಂತೂ ಸತ್ಯ.