ಬೆಂಗಳೂರು,ಸೆ.15- ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ, ಚಕಮಕಿ ಹಾಗೂ ಸವಾಲು,ಪ್ರತಿ ಸವಾಲಿಗೆ ವೇದಿಕೆಯಾಯಿತು.
ಈ ಕುರಿತಂತೆ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೊಂದು ಅತ್ಯಂತ ಗಂಭೀರವಾದ ವಿಷಯ. ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದಾರೆ. ಅನೇಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದೆ. ಹೀಗಾಗಿ ಚರ್ಚೆಗೆ ಅವಕಾಶ ಕೊಡಬೇಕೆಂದು ವಾದ ಮಂಡಿಸಿದರು.
ಈಹಗರಣ ಸಾಮಾನ್ಯ ವಿಷಯಲ್ಲ. 545 ಹುದ್ದೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅನೇಕರು ನೇಮಕಾತಿ ಹೊಂದಿದ್ದರು. ಆದರೆ ಏಕಾಏಕಿ ಹಗರಣ ನಡೆದಿದೆ ಎಂಬ ಒಂದೇ ಕಾರಣಕ್ಕೆ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಲಾಗಿದೆ ಹೀಗಾಗಿ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ತಕರಾರು ಎತ್ತಿದ ಕಾನೂನು ಸಚಿವ ಮಧುಸ್ವಾಮಿ, ಕೆಲವು ನಿಯಮಗಳನ್ನು ಓದಿ, ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಸದನದಲ್ಲಿಈ ವಿಷಯ ಚರ್ಚೆಗೆ ಕೊಡುವುದು ಸಮಂಜಸವಲ್ಲ. ನಿಲುವಳಿ ಸೂಚನೆಯಡಿ ಚರ್ಚೆ ಮಾಡಬೇಕಾದರೆ ಕೆಲವು ನೀತಿ ನಿಯಮಗಳಿರುತ್ತವೆ. ಪಟ್ಟು ಹಿಡಿಯುವುದು ಸದನಕ್ಕೆ ಶೋಭೆ ತರುವುದಿಲ್ಲ ಎಂದರು.
ಇದನ್ನು ವಿರೋಧಿಸಿದ ಪ್ರತಿಪಕ್ಷ ಸದಸ್ಯರು ಚರ್ಚೆ ನಡೆದರೆ ಕೆಲವರು ಸಿಟ್ಟುಗೇಳಬಹುದೆಂಬ ಆತಂಕದಿಂದ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರೇ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು
ಹಗರಣವನ್ನು ಹೊರತಂದಿದ್ದೇ ನಮ್ಮ ಸರ್ಕಾರ. ನೀವು ಎಲ್ಲವನ್ನು ಮುಚ್ಚಿ ಹಾಕಿದ್ದೀರಿ ಇದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.ಇದರಿಂದ ಸದನದಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪಗಳು ನಡೆದು ಕೋಲಾಹಲ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಾಯಿತು.
ಇದರ ನಡುವೆಯೇ ಮಾತನಾಡಿದ ಮಾಧುಸ್ವಾಮಿ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಹಾಕಿದೆ. ಸಿಐಡಿ ತನಿಖಾ ತಂಡಕ್ಕೆ ಮುಕ್ತವಾಗಿ ತನಿಖೆ ನಡೆಸಲು ಬಿಟ್ಟಿದ್ದೇವೆ. ಈ ಹಗರಣ ಹೊರಬಂದಿದ್ದೇ ನಮ್ಮ ಸರ್ಕಾರದಿಂದಾಗಿ ಇದರಲ್ಲಿ ಇವರೇನು ಪ್ರಶಂಸೆ ಗಿಟ್ಟಿಸಿಕೊಳ್ಳುವುದು ಎಂದು ತಿರುಗೇಟು ನೀಡಿದರು.
ಇಂತಹ ಅಕ್ರಮಗಳಲ್ಲಿ ಯಾರು ಭಾಗಿಯಾಗಿದ್ದಾರೋ ಅವರೆಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು. 2006ರಿಂದ ಏನೇನು ಆಗಿದೆಯೋ ಎಲ್ಲವೂ ಬಯಲಾಗಲಿದೆ ಎಂದರು.
ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿತುಇದಕ್ಕೆ ನಾವು ಹೆದರುವುದಿಲ್ಲ. 40 ವರ್ಷದಿಂದ ಈ ಸದನದಲ್ಲಿ ನಾನೂ ಇದ್ದೇನೆ. ರಾಜಕೀಯ ಭಾಷಣ ಮಾಡಲು ನನಗೂ ಬರುತ್ತದೆ 2006ರಿಂದ ಹಿಡಿದು ಇಲ್ಲಿಯವರೆಗೆ ಯಾವ್ಯಾವ ಇಲಾಖೆಯಲ್ಲಿ ಏನೇನು ಆಗಿದೆಯೋ ಎಲ್ಲವೂ ತನಿಖೆ ನಡೆಸಿ ಅಗತ್ಯವಿದ್ದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ನಾವು ಹೆದರುವುದಿಲ್ಲ ಎಂದು ಗುಡುಗಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೇರಿ ಬೇರೊಂದು ನಿಯಮಾವಳಿ ಅನ್ವಯ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡುತ್ತಿದ್ದಂತೆ ಪ್ರಕರಣಕ್ಕೆ ತೆರೆಬಿತ್ತು.