ಮಂಗಳೂರು,ಅ.18-ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ ಜೀವಬೆದರಿಕೆ ಹಾಕಿದ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ಹಸ್ತಾಂತರಿಸಲಾಗಿದೆ.
ಕಳೆದ ಅ.14ರಂದು ರಾತ್ರಿ ಮಂಗಳೂರಿನಿಂದ ಬೆಳ್ತಂಗಡಿಗೆ ಶಾಸಕರು ತೆರಳುತ್ತಿರುವಾಗ ಕಾರಿನಲ್ಲಿ ಹಿಂಬಾಲಿಸಿ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕರ ಕಾರು ಚಾಲಕ ನವೀನ್ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಮಂಗಳೂರು ನಿವಾಸಿ ರಿಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿತ್ತು. ಈಗ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿ ಡಿಪಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದಾರೆ. ತನಿಖಾ ದಾಖಲೆಗಳನ್ನು ಸಿಐಡಿಗೆ ತನಿಖಾಧಿಕಾರಿಯೇ ಹಸ್ತಾಂತರಿಸಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನಿರ್ದೇಶಿಸಲಾಗಿದೆ.
ಅಂದು ರಾತ್ರಿ 11.30ರ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಶಾಸಕರು ಅಲ್ಲಿಂದ ಬೆಳ್ತಂಗಡಿಗೆ ತೆರಳುತ್ತಿದ್ದರು. ಈ ವೇಳೆ ಶಾಸಕರು ತನ್ನ ಕಾರನ್ನು ಬಿಟ್ಟು ಸಂಬಂಧಿಕರೊಬ್ಬರ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಪಡೀಲ್ನಿಂದ ಫರಂಗಿಪೇಟೆಯವರೆಗೆ ಶಾಸಕರು ಪ್ರಯಾಣಿಸುತ್ತಿದ್ದ ಕಾರನ್ನ ದುಷ್ಕರ್ಮಿಗಳು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದರು. ಬಳಿಕ ಫರಂಗಿಪೇಟೆಯಲ್ಲಿ ಕಾರನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದರು.