ಬೆಂಗಳೂರು,ಫೆ.8-
ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಸುವವರಿಗೆ ಶೇ. 50 ರಿಯಾಯಿತಿ ಆರಂಭಗೊಂಡಿರುವ ಆರನೇ ದಿನವೂ ಕೋಟಿಗಟ್ಟಲೆ ರೂ. ದಂಡ ಸಂಗ್ರಹವಾಗಿದೆ. ವಾಹನಗಳ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 45 ಕೋಟಿಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ.
ಕಳೆದ ಫೆ. 3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗಳಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಮೂರನೇ ದಿನ 7,49,94,870 ರೂಗಳು ಸಂಗ್ರಹವಾದರೆ,ನಾಲ್ಕನೇ ದಿನ 9,57,12,420 ರೂ. ಸಂಗ್ರಹಗೊಂಡರೆ, ಐದನೇ ದಿನವಾದ ನಿನ್ನೆ 8,13,12,200 ರೂ. ಸಂಗ್ರಹಗೊಂಡು ಒಟ್ಟು 41,20,89,231 ರೂ. ಸಂಗ್ರಹವಾಗಿದೆ. 14,71,231ಪ್ರಕರಣಗಳು ಇತ್ಯರ್ಥಗೊಂಡಿದ್ದು ಇಂದು ಬೆಳಿಗ್ಗೆಯಿಂದ ಮತ್ತೆ ದಂಡ ಪಾವತಿ ಬಿರುಸಿನಿಂದ ನಡೆಯುತ್ತಿದ್ದು ಅದು 45 ಕೋಟಿ ದಾಟಿದೆ.
ಸಂಚಾರ ನಿಯಮ ಉಲ್ಲಂಘನೆಯ ರಿಯಾಯಿತಿ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಇಂದು ಹೆಚ್ಚಳ ಕಂಡುಬಂದಿದ್ದು ಸಂಜೆಯ ವೇಳೆಗೆ 45 ಕೋಟಿಯನ್ನು ದಾಟಲಿದೆ. ನಗರದ ಸಂಚಾರ ಪೊಲೀಸ್ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿರುವುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳತೊಡಗಿರುವುದರಿಂದ ದಂಡ ಪಾವತಿಗೆ ಭಾರಿ ಪ್ರಮಾಣದ ಜನಸಂದಣಿ ಉಂಟಾಗಿದೆ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ.
1 ಟಿಪ್ಪಣಿ
купить диплом о высшем образовании в нижнем тагиле landik-diploms.ru .