ರಾಜ್ಯ ರಾಜಕಾರಣದಲ್ಲಿ ಇದೀಗ ಹನಿ ಟ್ರ್ಯಾಪ್ ಪ್ರಕರಣ ದೊಡ್ಡ ರೀತಿಯಲ್ಲಿ ಸದ್ದು ಮಾಡತೊಡಗಿದೆ. ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರು ತಮ್ಮನ್ನು
ಹನಿ ಟ್ರ್ಯಾಪ್ ಜಾಲದಲ್ಲಿ ಕೆಡವಲು ಮಾಡಿದ ಪ್ರಯತ್ನ ಬಗ್ಗೆ ವಿಧಾನಸಭೆಯಲ್ಲೇ ಪ್ರಸ್ತಾಪಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಅವರ ಪುತ್ರ ಹಾಗೂ ವಿಧಾನಪರಿಷತ್ತು ಸದಸ್ಯ ರಾಜೇಂದ್ರ ಅವರು ಕೂಡ ತಮ್ಮನ್ನೂ ಕೂಡ ಈ ಜಾಲದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಕಳೆದ ಆರು ತಿಂಗಳಿನಿಂದ ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ತಾವೊಬ್ಬರೇ ಅಲ್ಲ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಸೇರುವ 48 ನಾಯಕರ ಮೇಲೆ ಈ ಪ್ರಯೋಗ ಮಾಡಲಾಗಿದೆ ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು ಕೂಡ ಇದರಲ್ಲಿ ಸಿಲುಕಿದ್ದಾರೆ ಎಂದು ರಾಜಣ್ಣ ಹೇಳುವ ಮೂಲಕ ಇದರಿಂದ ಯಾರೂ ಕೂಡ ಹೊರತಾಗಿಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಹನಿ ಟ್ರ್ಯಾಪ್ ಎನ್ನುವುದು ಇದೇ ಮೊದಲಲ್ಲ. ಇಲ್ಲಿಗೆ ಇದು ಮುಕ್ತಾಯವಾಗಲಿದೆ ಎಂದು ಕೂಡ ಹೇಳುವುದಿಲ್ಲ ಆದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಇದರ ಹಿಂದಿರುವ ಶಕ್ತಿ ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕೆಂಬ ದೃಷ್ಟಿಯಿಂದ ಈ ವಿಚಾರದಲ್ಲಿ ತಾವು ದೊಡ್ಡದಾಗಿ ಧ್ವನಿ ಎತ್ತಿದ್ದೇನೆ ಎಂಬ ಸಮರ್ಥನೆಯನ್ನು ರಾಜಣ್ಣ ನೀಡುತ್ತಿದ್ದಾರೆ.
ಸ್ವಾತಂತ್ರ್ಯ ನಂತರದ ಇತಿಹಾಸವನ್ನು ಗಮನಿಸುವುದಾದರೆ, ಹನಿ ಟ್ರ್ಯಾಪ್ ಎನ್ನುವುದು ಹೊಸದೇನೂ ಅಲ್ಲ. ಹಾಗೆಯೇ ಇದೇನು ಗಂಭೀರ ಸ್ವರೂಪದ ಅಪರಾಧ ಪ್ರಕರಣವೂ ಅಲ್ಲ. ಆದರೆ ಇದರ ಸುಳಿಗೆ ಸಿಲುಕಿದ ಅನೇಕ ನಾಯಕರು ಸಾರ್ವಜನಿಕ ಬದುಕು ಹಾಳಾಗಿ ಹೋಗಿದೆ.
ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇಂತಹ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು
1977ರಲ್ಲಿ.ಆಗ ಶೋಷಿತ ವರ್ಗಗಳ ಕಣ್ಮಣಿ,ಪ್ರಭಾವಿ ನಾಯಕ ಬಾಬು ಜಗಜೀವನ್ ರಾಮ್ ಅವರು ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಉಪ ಪ್ರಧಾನಿಯಾಗಿದ್ದರು.
ಇವರ ಪುತ್ರ ಸುರೇಶ್ ರಾಮ್ ಯುವ ರಾಜಕಾರಣಿಯಾಗಿ ಗಮನ ಸೆಳೆದಿದ್ದರು. ರಾಜಕೀಯವಾಗಿ ಇವರು ಸಾಕಷ್ಟು ಮಹತ್ವಕಾಂಕ್ಷೆ ಹೊಂದಿದ್ದು, ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸುತ್ತಿದ್ದರು. ಇವರನ್ನು ವ್ಯವಸ್ಥಿತವಾಗಿ ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲಾಯಿತು.
ಸುರೇಶ್ ರಾಮ್ ಅವರು ಹುಡುಗಿಯೊಬ್ಬಳ ಜತೆ ಅಸಹ್ಯಕರ ಭಂಗಿಯಲ್ಲಿದ್ದ ಫೋಟೋ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಅಚ್ಚರಿಯ ವಿಷಯ ಎಂದರೆ ಆ ನಿಯತ ಕಾಲಿಕೆಯ ಸಂಪಾದಕಿ ಮನೇಕಾ ಗಾಂಧಿ.ಇನ್ನೂ ಆಸಕ್ತಿಯ ವಿಷಯ ಎಂದರೆ ಆಗ ಮನೇಕಾ ಗಾಂಧಿ ಅವರು ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು ಇಂದಿರಾಗಾಂಧಿಯವರ ಅನೇಕ ರಾಜಕೀಯ ನಿರ್ಧಾರಗಳಲ್ಲಿ ತಮ್ಮ ಪತಿ ಸಂಜಯ್ ಗಾಂಧಿ ಅವರೊಂದಿಗೆ ಮನೇಕಾ ಗಾಂಧಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು
ನಿಯತಕಾಲಿಕೆಯಲ್ಲಿ ಉಪ ಪ್ರಧಾನಿ ಜಗಜೀವನ್ ರಾಮ್ ಅವರ ಮಗ ಸುರೇಶ್ ರಾಮ್ ಅವರ ಬೆತ್ತಲೆ ಫೋಟೋ ಪ್ರಕಟವಾಗುತ್ತಿದ್ದಂತೆ ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಯಾಯಿತು. ಈ ವಿದ್ಯಮಾನ ಸುರೇಶ್ ರಾಮ್ ಅವರ ರಾಜಕೀಯ ಜೀವನದ ಮೇಲೆ ಬರೆ ಎಳೆದಿದ್ದು ಮಾತ್ರವಲ್ಲದೆ, ಜಗಜೀವನ್ ರಾಂ ಅವರ ರಾಜಕೀಯ ಜೀವನಕ್ಕೆ ಹೊಡೆತ ನೀಡಿತು.
ಬಿಜೆಪಿಯಲ್ಲಿ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಮತ್ತು ಅಡ್ವಾಣಿ ಅವರ ಸಮಯದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ನಾಯಕ ಆರ್ ಎಸ್ ಎಸ್ ಪ್ರಚಾರಕರಾಗಿದ್ದ ಸಂಜಯ್ ಸಿಂಗ್ ಗುಜರಾತ್ ನಲ್ಲಿ ಮಹಿಳೆಯೊಬ್ಬರ ಜೊತೆಗೆ ಇದ್ದ ದೃಶ್ಯಗಳು ಬಹಿರಂಗಗೊಂಡು ಅವರು ರಾಜಕೀಯವಾಗಿ ಮೂಲ ಗುಂಪಾದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಬಲ ಎದುರಾಳಿ ಎಂದೇ ಗುರುತಿಸಲಾಗಿದ್ದ ಸಂಜಯ್ ಸಿಂಗ್ ಅವರನ್ನು ಹಣಿಯಲು ಇದನ್ನು ಬಳಸಲಾಗಿತ್ತು ಎಂಬ ಆರೋಪ ಕೇಳಿ ಬಂದರೂ ಕೂಡ ಅದು ಬಹಿರಂಗವಾಗಲಿಲ್ಲ.
ಇನ್ನು ಕರ್ನಾಟಕದ ಮಟ್ಟಿಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು ದಿವಂಗತ ವಿ ಎಸ್ ಕೌಜಲಗಿ ಅವರ ವಿಚಾರಕ್ಕೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವಿ ಎಸ್ ಕೌಜಲಗಿ ಅವರನ್ನು ಹಣೆಯಲು ಲಂಚ ಮತ್ತು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲಾಗಿತ್ತು.
ಸದ್ಯ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಇದರ ಸೂತ್ರಧಾರ ಎಂದು ಹೇಳಲಾಯಿತು ಆದರೂ ಯಾರ ಹೆಸರು ಕೂಡ ಬಹಿರಂಗವಾಗಲಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ಜೇಬುಗಳ್ಳರಿದ್ದಾರೆ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿ.ಎಸ್. ಕೌಜಲಗಿ ಅವರ ರಾಜಕೀಯ ಬದುಕು ಅಲ್ಲಿಗೆ ಮುಕ್ತಾಯವಾಯಿತು
ಕಳೆದ 20 ವರ್ಷಗಳಿಂದಲೂ ಇಂತಹ ಅನೇಕ ಹನಿಟ್ರ್ಯಾಪ್ ಪ್ರಕರಣಗಳು ನಡೆದಿವೆ.
2007ರ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಂಪಿ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀಗೆ ಮುತ್ತು ನೀಡಿದ ಫೋಟೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.
2009ರಲ್ಲಿ ಆಹಾರ ಸಚಿವರಾಗಿದ್ದ ಹರತಾಳು ಹಾಲಪ್ಪ ಅವರ ಪ್ರಕರಣ ಬೆಳಕಿಗೆ ಬಂದು ಅವರು ಕೂಡ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
2016ರಲ್ಲಿ ರಾಜ್ಯದ ಅಬಕಾರಿ ಮಂತ್ರಿಯಾಗಿದ್ದ ಎಚ್ ವೈ ಮೇಟಿ ಅವರು ವರ್ಗಾವಣೆ ವಿಚಾರವಾಗಿ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮಂತ್ರಿ ಸ್ಥಾನ ತೊರೆದರು. ಮಾಜಿ ಮಂತ್ರಿ ಎಸ್.ಎ. ರಾಮದಾಸ್, ರಮೇಶ್ ಜಾರಕಿಹೊಳಿ, ಸದಾನಂದ ಗೌಡ, ಅರವಿಂದ ಲಿಂಬಾವಳಿ, ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ರಾಜೇಶ್, ಜೆ.ಟಿ.ಪಾಟೀಲ್ ಸೇರಿದಂತೆ ಹಲವಾರು ರಾಜಕೀಯ ನಾಯಕರ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ
ಹೀಗೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಹಲವಾರು ನಾಯಕರು ಇಂತಹ ಸುಳಿಗೆ ಸಿಲುಕಿ ರಾಜಕೀಯವಾಗಿ ದೊಡ್ಡ ಹಿನ್ನೆಡೆ ಅನುಭವಿಸಿದ್ದಾರೆ.
ಎಲ್ಲಾ ಪಕ್ಷಗಳ ನಾಯಕರನ್ನು ಇದರಲ್ಲಿ ಸಿಲುಕಿಸಲಾಗಿದೆ. ರಾಜಕಾರಣಿಗಳು ಮಾತ್ರವಲ್ಲ ಉನ್ನತಾಧಿಕಾರಿಗಳು, ನ್ಯಾಯಾಧೀಶರು ಕೂಡ ಇದರ ಜಾಲದಲ್ಲಿ ಸಿಲುಕಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ ಇಂತಹ ಜಾಲದಲ್ಲಿ ಸಿಲುಕಿದ ಹಲವು ಪ್ರಭಾವಿಗಳು ಸಾರ್ವಜನಿಕ ಬದುಕಿನಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಇಂತಹ ಜಾಲದಲ್ಲಿ ಸಿಲುಕುವಂತೆ ಮಾಡುವ ವ್ಯಕ್ತಿಗಳಿಗೆ ಮಾತ್ರ ಯಾವುದೇ ದೊಡ್ಡ ಶಿಕ್ಷೆ ಆಗಿಲ್ಲ ಬದಲಿಗೆ ಅವರಿಗೆ ಲಾಭವೇ ಆಗಿದೆ ಎನ್ನುತ್ತವೆ ಹಲವು ವರದಿಗಳು
ಇದಕ್ಕೆ ಪ್ರಮುಖ ಕಾರಣ ಹನಿಟ್ರ್ಯಾಪ್ ಯಾವಾಗಲೂ ಗಂಭೀರ ಸ್ವರೂಪದ ಅಪರಾಧ ಎನಿಸಿಕೊಂಡಿಲ್ಲ. ಇದನ್ನು ಅಸಹಜ ಲೈಂಗಿಕ ಕ್ರಿಯೆ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ, ಇದರ ಹೆಸರಿನಲ್ಲಿ ಬೆದರಿಕೆ ಹಾಕುವುದು ಅಥವಾ ಸುಲಿಗೆ ಮಾಡಿದರೆ ಬೇರೆ ರೀತಿಯ ಶಿಕ್ಷೆ ಇದೆ. ಬೆದರಿಕೆ ಹಾಕಿ ಸುಲಿಗೆ ಮಾಡಿದರೆ ಕೇವಲ 2 ವರ್ಷ, ವಂಚನೆಗೆ 1 ವರ್ಷ ಶಿಕ್ಷೆ. ಎರಡೂ ಸುಲಭ ಜಾಮೀನು ಸಿಗುವ ಅಪರಾಧಗಳು. ಹೀಗಾಗಿ ಹನಿ ಟ್ರ್ಯಾಪ್ ಪ್ರಕರಣವನ್ನು ಶಿಕ್ಷಿಸಲು
ಸೂಕ್ತ ಕಾನೂನುಗಳ ಕೊರತೆ ಇದೆ. ಈ ರೀತಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹನಿಟ್ರ್ಯಾಪ್ ಅನ್ನು ವಿವರಿಸಲು ಸ್ಪಷ್ಟ ಕಾನೂನು ಇಲ್ಲ. ಪೊಲೀಸರು ಹಾಕುವ ಸುಲಿಗೆ, ವಂಚನೆ ಸೆಕ್ಷನ್‌ಗಳಲ್ಲಿ ಜಾಮೀನು ಸಿಗುವುದು ಸುಲಭ.
ಹನಿಟ್ರ್ಯಾಪ್‌ನಿಂದ ಕೋಟಿ ಕೋಟಿ ಸುಲಿಗೆ ಮಾಡಿದರೂ, ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಂಡರೂ ಶಿಕ್ಷೆ ಕಡಿಮೆ. ದರೋಡೆಗೆ 10 ವರ್ಷ ಶಿಕ್ಷೆ ಇದೆ. ಹೀಗಾಗಿ ಹನಿಟ್ರ್ಯಾಪ್‌ನಂತಹ ಗಂಭೀರ ಅಪರಾಧ ಮಾಡಿದವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹನಿಟ್ರ್ಯಾಪ್‌ಗೆಂದೇ ಕಠಿಣ ಕಾನೂನು ರೂಪಿಸುವ ಮೂಲಕ ಭಾರತೀಯ ನ್ಯಾಯ ಸಂಹಿತೆಗೆ ತಿದ್ದುಪಡಿ ತಂಡದಲ್ಲಿ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.
ಇಂತಹ ಜಾಲ ಹೆಣೆಯುವವರು, ಕೃತ್ಯದಲ್ಲಿ ಪಾಲ್ಗೊಳ್ಳುವವರನ್ನು ಶಿಕ್ಷಿಸಲು ಸೂಕ್ತ ಕಾನೂನಿನ ಅವಶ್ಯಕತೆ ಒಂದು ಕಡೆಯಾದರೆ ಸಾರ್ವಜನಿಕ ಬದುಕಿನಲ್ಲಿರುವವರಿಗೆ ತಾವು ಹೇಗೆ ಇರುತ್ತೇವೆ ಎನ್ನುವುದು ಅತ್ಯಂತ ಪ್ರಮುಖವಾಗುತ್ತದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಅವರು ಮದಿರೆ ಮತ್ತು ಮಾನಿನಿ ತಮ್ಮ ದೌರ್ಬಲ್ಯ ಎಂದು ಬಹಿರಂಗವಾಗಿ ಹೇಳಿ ಅದನ್ನು ಆರಗಿಸಿಕೊಂಡರು ಅಂದಿನ ಕಾಲಘಟ್ಟವೇ ಬೇರೆ ಇಂದಿನ ಕಾಲಘಟ್ಟವೇ ಬೇರೆ ಹೀಗಾಗಿ ಮಂತ್ರಿ ಕೆ ಎನ್ ರಾಜಣ್ಣ ಅವರು ತಾವು ಸತ್ಯಹರಿಶ್ಚಂದ್ರನೂ ಅಲ್ಲ ಶ್ರೀರಾಮಚಂದ್ರನೂ ಅಲ್ಲ ಎಂದು ನೀಡಿರುವ ಹೇಳಿಕೆಯನ್ನು ಆ ರೀತಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ.
ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪತ್ರಕರ್ತನಂತೆ ಕೆಲಸ ಮಾಡುತ್ತಿದ್ದಾನೆ ತನಗೆ ಬಂದಂತಹ ಸುದ್ದಿಯನ್ನು ಇನ್ನೊಂದು ಗುಂಪುಗಳಿಗೆ ವರ್ಗಾಯಿಸುವುದಷ್ಟೇ ಅಲ್ಲ ಅದರ ಪರ ವಿರೋಧದ ಕುರಿತಾಗಿ ಚರ್ಚೆಯಲ್ಲಿ ತೊಡಗುತ್ತಾನೆ ಹೀಗಾಗಿ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಖಾಸಗಿ ಬದುಕು ಮತ್ತು ಬಹಿರಂಗ ಬದುಕು ಎನ್ನುವುದು ಇಲ್ಲ ಎಲ್ಲವೂ ಕೂಡ ಪಾರದರ್ಶಕವಾಗಿರಬೇಕು. ಸಾರ್ವಜನಿಕ ಬದುಕಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಆದರ್ಶಪ್ರಾಯರಾಗಿರಬೇಕೆಂದು ಬಯಸುವ ಈ ಕಾಲದಲ್ಲಿ ಶ್ರೀರಾಮಚಂದ್ರ ಮತ್ತು ಹರಿಶ್ಚಂದ್ರ ಎಂಬ ಸರಳವಾದ ಹೇಳಿಕೆಯನ್ನು ನೀಡುವ ಮೂಲಕ ಬಚಾವಾಗಲು ಸಾಧ್ಯವಿಲ್ಲ.
ಹೀಗಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದಂತೆ ಅವರು ಹಲೋ ಎಂದರೆ, ನೀವು ಹಲೋ ಎಂದು ಯಾಕೆ ಹೇಳಬೇಕು..
ಒಟ್ಟಾರೆಯಾಗಿ ಈ ಪ್ರಕರಣ ಯಾಕೆ ನಡೆದಿದೆ ಇದರ ಹಿಂದಿರುವ ಶಕ್ತಿಗಳು ಯಾವುವು ಅವರ ಉದ್ದೇಶ ಏನು ಎಂಬುದು ಬಹಿರಂಗವಾಗಬೇಕು ಎಂಬ ವಿಷಯ ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳು ತಾವು ಹೇಗೆ ಸಮಾಜಕ್ಕೆ ಆದರ್ಶ ಪ್ರಾಯವಾಗಿ ಬದುಕಬೇಕು ಎನ್ನುವುದು ಅದಕ್ಕಿಂತಲೂ ಮುಖ್ಯವೆನಿಸುತ್ತದೆ.ಹೀಗಾದಲ್ಲಿ ಮಾತ್ರ ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕುವ ಸಿಲುಕಿಸುವ ಪ್ರಯತ್ನ ನಿಲ್ಲುತ್ತದೆ.