ಚಾಮರಾಜನಗರ,ಜೂ.28-
ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಸಾವನ್ನಪ್ಪಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾದ ಅಲಿಯಾಸ್ ಮಾದುರಾಜು ಹಾಗೂ ನಾಗರಾಜ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಮಾದ ಅಲಿಯಾಸ್ ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು.ಇದರಿಂದ ಉಂಟಾದ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರಿಟ್ಟಿದ್ದಾನೆ. ಬಳಿಕ ಹಸು ಕೊಂದ ಹುಲಿಯನ್ನು ಕೊಲ್ಲಲು ಇಬ್ಬರು ನಿರ್ಧರಿಸಿ ಕ್ರಿಮಿನಾಶಕ ಕೂಡ ತಂದಿಟ್ಟಿದ್ದಾರೆ.
ಪ್ರಕರಣ ಬೆನ್ನಲ್ಲೇ ನಾಪತ್ತೆಯಾದ ಮಾದ ಅಲಿಯಾಸ್ ಮಾದುರಾಜುನನ್ನು ,ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಯ ಬಂಧಿಸಲಾಗಿದೆ.
ಪೊಲೀಸರು ವಿಚಾರಣೆ ನಡೆಸಿದಾಗ ಮಾದ ಆರೋಪಿ ಎಂಬುದು ದೃಢವಾಗಿದ್ದು, ಹಸುವನ್ನು ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಆದರೆ ಪುತ್ರ ಮಾದನನ್ನು ಬಚಾವ್ ಮಾಡಲು ಆತನ ತಂದೆ ಶಿವಣ್ಣ ನಾನೇ ವಿಷ ಹಾಕಿರುವುದಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ಮಾದನ ತಂದೆ ಶಿವಣ್ಣನನ್ನು ಪ್ರಕರಣದಿಂದ ಕೈಬಿಡಲಾಗಿದೆ.
ತನಿಖಾ ತಂಡ ಬದಲಾವಣೆ:
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ತನಿಖಾ ತಂಡದ ಮುಖ್ಯಸ್ಥರಾಗಿ ಪಿಸಿಸಿಎಫ್ ರವಿ ಬದಲಾಗಿ ಎಪಿಸಿಸಿಎಫ್ ಕುಮಾರ್ ಪುಷ್ಕರ್ ಅವರನ್ನು ನೇಮಕ ಮಾಡಲಾಗಿದೆ. ಪಿಸಿಸಿಎಫ್ ರವಿ ಕೋರಿಕೆ ಮೇರೆಗೆ ತನಿಖಾ ತಂಡದ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ.
ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಎಪಿಸಿಸಿಎಫ್ ಶ್ರೀನಿವಾಸಲು, ಎನ್‌ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ಮೈಸೂರು ಮೃಗಾಲಯದ ಪಶುವೈದ್ಯಾಧಿಕಾರಿ ಶಶಿಧರ್ ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ಅವರನ್ನು ತನಿಖಾ ತಂಡ ಒಳಗೊಂಡಿದೆ.
ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು. ಇತ್ತ ಹುಲಿಗಳು ಸತ್ತಿದ್ದನ್ನು ನೋಡಿ ಮಾದುರಾಜು ಸಂತಸ ಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ಸತ್ಯವನ್ನು ಬಾಯ್ಬಿಡುತ್ತಿದ್ದಾರೆ
Previous Articleರಾಜ್ಯ ಬಿಜೆಪಿ ಅಧ್ಯಕ್ಷರ ಬಗ್ಗೆ ಆರ್ ಅಶೋಕ್ ಹೇಳಿದ್ದೇನು ಗೊತ್ತಾ ?
Next Article ಬಿಜೆಪಿ ಬಿಕ್ಕಟ್ಟಿಗೆ ಆರ್ ಎಸ್ ಎಸ್ ತೇಪೆ.