ಬೆಂಗಳೂರು – ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ತೀವ್ರಗೊಳ್ಳುತ್ತಾ ಸಾಗುತ್ತಿದೆ .ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಗಮನ ಸೆಳೆದಿವೆ.
ಈ ಎರಡು ಪಕ್ಷಗಳು ಈ ಬಾರಿ ಕರ್ನಾಟಕದಿಂದ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಹಠಕ್ಕೆ ಬಿದ್ದವರಂತೆ ಕೆಲಸ ಮಾಡುತ್ತಿವೆ. ಗೆಲ್ಲುವ ಅಭ್ಯರ್ಥಿಗಳಿಗಾಗಿ ಎರಡೂ ಪಕ್ಷಗಳಲ್ಲಿ ಹುಡುಕಾಟ ತೀವ್ರಗೊಂಡಿರುವ ಬೆನ್ನಲ್ಲೇ ಕಾರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕುತೂಹಲ ಮೂಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು ಕಂಡ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸೋಲಿಗೆ ಹಾಲಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಕಾರಣ ಎಂದು ಭಾವಿಸಿದ್ದಾರೆ .
ಶಿರಸಿ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಕಾಗೇರಿ ಅವರಿಗೆ ದೊಡ್ಡ ಹೊಡೆತ ನೀಡಿದೆ. ಇಡೀ ರಾಜ್ಯದಲ್ಲಿ ಶಿರಸಿ ಕ್ಷೇತ್ರ ಬ್ರಾಹ್ಮಣ ಸಮುದಾಯದ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದೆ ಇಲ್ಲಿ ಈ ಸಮುದಾಯಕ್ಕೆ ಸೇರಿದ ಮತದಾರರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಹೀಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಹಿಂದುಳಿದ ಸಮುದಾಯಕ್ಕೆ ಸೇರಿದ ಭೀಮಣ್ಣ ನಾಯಕ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಹಲವರ ಹುಬ್ಬಙರುವಂತೆ ಮಾಡಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಎನ್ನಲಾಗುತ್ತಿದೆ. ಜಿಲ್ಲೆಯ ಬಿಜೆಪಿ ರಾಜಕಾರಣದಲ್ಲಿ ಈ ಇಬ್ಬರು ನಾಯಕರು ಹಲವಾರು ಕಾರಣಗಳಿಂದ ಬದ್ದ ವೈರಿಗಳಾಗಿದ್ದಾರೆ. ಇಬ್ಬರೂ ಕೂಡ ಶಿರಸಿಯ ನಿವಾಸಿಗಳಾಗಿದ್ದು ಎಬಿವಿಪಿ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದರು ಮೊದಲಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಈ ಇಬ್ಬರು ನಾಯಕರು ನಂತರದಲ್ಲಿ ಪರಸ್ಪರ ವಿರೋಧಿಗಳಾದರು ಆದರೂ,ಕೂಡ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಕಾರವಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣ ಪ್ರವೇಶಿಸಲು ಇಚ್ಚಿಸಿದ್ದರು ಆದರೆ ಅದಕ್ಕೆ ಅಡ್ಡಿಯಾಗಿದ್ದು ವಿಶ್ವೇಶ್ವರ ಹೆಗಡೆ ಕಾಗೇರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ನಡುವೆ ಅನಂತ್ ಕುಮಾರ್ ಹೆಗಡೆಯವರ ಆರೋಗದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು ಅಷ್ಟೇ ಅಲ್ಲ ಈ ಬಾರಿ ಸಂಸತ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಕೂಡ ಕಡಿಮೆಯಿತ್ತು.
ಆದರೂ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೇರಿ ವಿರುದ್ಧ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯಕ್ ಅವರ ಗೆಲುವಿಗೆ ಕಾರಣರಾದರು ಎನ್ನುವುದು ಕಾಗೇರಿ ಮತ್ತು ಅವರ ಬೆಂಬಲಿಗರ ನಂಬಿಕೆ ಯಾಗಿದೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಕಾಗೇರಿ ಅವರು ತಮ್ಮ ಸೋಲಿಗೆ ಪಕ್ಷದ ಕೆಲ ನಾಯಕರೆ ಕಾರಣ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ ಇದು ಇಬ್ಬರ ನಡುವಿನ ಮುನಿಸು ದೊಡ್ಡದಾಗಲು ಮತ್ತೊಂದು ಕಾರಣವಾಯಿತು.
ಇದಷ್ಟೇ ಅಲ್ಲ ಕಾಗೇರಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಸ್ಪರ್ಧಿಸುವುದಿಲ್ಲ ಇದಕ್ಕೆ ಕಾರಣ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ ಅಲ್ಲದೆ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಿಕೊಳ್ಳುತ್ತಾ ಚುನಾವಣೆಗೆ ತಯಾರಿ ನಡೆಸಿದ್ದಾರೆ ಯಾವಾಗ ಕಾಗೇರಿ ಅವರು ಲೋಕಸಭೆ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿತ್ತೋ ಆ ಕ್ಷಣವೇ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯರಾದರು.
ಏಕಾಏಕಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ತಾವಿನ್ನೂ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ ಚುನಾವಣೆ ಸ್ಪರ್ಧಿಸುವ ಹುಮ್ಮಸು ಮತ್ತು ತಾಕತ್ತು ಇದೆ ಎಂದು ತೋರಿಸಿಕೊಳ್ಳುತ್ತಾ ಪಕ್ಷದ ಕಾರ್ಯಕರ್ತರ ಸಭೆ ನಡೆಸತೊಡಗಿದ್ದಾರೆ.
ಅಲ್ಲದೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸುವ ದೃಷ್ಟಿಯಿಂದ ತಾವು ಈ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳುತ್ತಾ ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣ ಮತ್ತೊಮ್ಮೆ ಕುತೂಹಲಕರ ಘಟ್ಟಕ್ಕೆ ಬಂದು ನಿಂತಿದೆ.
ಮತ್ತೊಂದಡೆಯಲ್ಲಿ ತಾವು ರಾಜ್ಯ ರಾಜಕಾರಣದಿಂದ ನಿರ್ಗಮಿಸುತ್ತಿದ್ದು ರಾಷ್ಟ್ರೀಯ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಬಯಸಿದ್ದೇನೆ ಹೀಗಾಗಿ ಈ ಬಾರಿ ಕಾರವಾರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೊಂದು ಕಡೆಯಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.
ಸಂಘ ಪರಿವಾರ ನಾಯಕರ ಬೆಂಬಲ ತಮಗಿದೆ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರ ಪಿತೂರಿಯಿಂದ ತನಗೆ ಸೋಲಾಗಿದೆ ಎಂಬ ಭಾವನೆ ಪರಿವಾರದ ನಾಯಕರಲ್ಲಿದೆ.ಹೀಗಾಗಿ ಅವರೆಲ್ಲಾ ತಮ್ಮ ಬೆನ್ನಿಗೆ ನಿಂತಿದ್ದಾರೆ ಹೀಗಾಗಿ ತಮಗೆ ಕಾರವಾರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಎಂಬ ವಿಶ್ವಾಸದಲ್ಲಿದ್ದಾರೆ, ವಿಶ್ವೇಶ್ವರ ಹೆಗಡೆ ಕಾಗೇರಿ.
ಹೀಗಾಗಿ ಈ ಇಬ್ಬರೂ ಸಂಘ ಪರಿವಾರ ಮೂಲದ ಬಿಜೆಪಿ ನಾಯಕರ ಬಿಗ್ ಫೈಟ್ ನಿಂದಾಗಿ ಕಾರವಾರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಭರ್ಜರಿ ರಂಗು ಬಂದಿದೆ.