ಬೆಂಗಳೂರು,ಮಾ.13-
ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ ಹೆಚ್ಎಂ)ಒಳಗುತ್ತಿಗೆ ನೌಕರರನ್ನು ಕಾಯಂ ಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಎನ್ ಹೆಚ್ ಎಂ ಅಡಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಒಳಗುತ್ತಿಗೆ ನೌಕರರು ಕಳೆದ 15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ತಕ್ಷಣವೇ ಕಾಯಂಗೊಳಿಸುವಂತೆ ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಸೇರಿದ ನೂರಾರು ಒಳಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಣಿಪುರ ಸರ್ಕಾರ ಈಗಾಗಲೇ ಎನ್ ಹೆಚ್ಎಂ ಒಳಗುತ್ತಿಗೆಯ ಎಲ್ಲ ವೃಂದದ ನೌಕರರನ್ನು ಯಥಾವತ್ತಾಗಿ ಕಾಯಂಗೊಳಿಸಿದೆ.
ಒಡಿಸ್ಸಾ, ರಾಜಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಒಳಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಾಜ್ಯದಲ್ಲಿ ಎನ್.ಹೆಚ್.ಎಮ್. ಕಾರ್ಯಕ್ರಮಗಳ ಕರ್ತವ್ಯದ ಜೊತೆಗೆ ಕೊರೊನಾ ಸೊಂಕಿತರ ಆರೈಕೆ, ವ್ಯಾಕ್ಸಿನ್ ಕೊಡುವುದು ಸೇರಿ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದರೂ ಎನ್ ಹೆಚ್ ಎಂ ಅಡಿಯಲ್ಲಿ ಗುತ್ತಿಗೆ ನೌಕರರಿಗೆ ಅಲ್ಪ ಮೊತ್ತದ ವೇತನ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಅಲ್ಪ ಮೊತ್ತದ ವೇತನದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದ್ದು, ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿದರು
ಕಳೆದ ಫೆಬ್ರವರಿಯಿಂದ 13ರಿಂದ ಸ್ವಾತಂತ್ರ್ಯ ಉದ್ಯಾನವದಲ್ಲಿ ಮುಷ್ಕರ ನಡೆಸಲಾಗುತ್ತಿದೆ. 29 ದಿನಗಳೂ ಕಳೆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿಲ್ಲದ್ದರಿಂದ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.