ಸಿಕಂದರಾಬಾದ್(ತೆಲಂಗಾಣ),ಸೆ.13- ಜನನಿಬಿಡ ರಸ್ತೆಯಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ, ಶೋ ರೂಮ್ ಮೇಲ್ಭಾಗದಲ್ಲಿದ್ದ ಲಾಡ್ಜ್ನಲ್ಲಿ ತಂಗಿದ್ದವರಲ್ಲಿ 8 ಮಂದಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರಲ್ಲಿ ಏಳು ಮಂದಿ ಪುರುಷರು ಹಾಗೂ ಓರ್ವ ಮಹಿಳೆ .ಈ ದುರ್ಘಟನೆಯಲ್ಲಿ ಉಸಿರಾಟದ ಸಮಸ್ಯೆಯಿಂದ
ಬಳಲುತ್ತಿದ್ದ 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ.
ಮೃತರನ್ನು ವಿಜಯವಾಡ ಮೂಲದ ಎಂ ಹರೀಶ್, ಚೆನ್ನೈ ಮೂಲದ ಸೀತಾರಾಮನ್ ಹಾಗೂ ದೆಹಲಿಯ ವೀತೇಂದ್ರ ಎಂದು ಗುರುತಿಸಲಾಗಿದ್ದು,ಉಳಿದವರ ಗುರುತು ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ದಟ್ಟ ಹೊಗೆಯಿಂದ ಉಸಿರುಗಟ್ಟಿ ಇವರೆಲ್ಲರೂ ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ 35 ರಿಂದ 40 ವರ್ಷದ ಒಳಗಿನವರಾಗಿದ್ದಾರೆ.
ದುರಂತ ಸಂಭವಿಸಿದ ಕಟ್ಟಡ ಐದು ಅಂತಸ್ತಿನದ್ದಾಗಿದ್ದು ನೆಲ ಮಹಡಿಯಲ್ಲಿದ್ದ ಎಲೆಕ್ಟ್ರಿಕ್ ವಾಹನದ ಶೋರೂಮ್ನಲ್ಲಿ ರಾತ್ರಿ
ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ದಟ್ಟ ಹೊಗೆ ಹರಡಿದ್ದು, ಮೇಲ್ಮಹಡಿಯಲ್ಲಿರುವ ಲಾಡ್ಜ್ನ ಕೊಠಡಿಯಲ್ಲಿ ಹೊಗೆ ವ್ಯಾಪಿಸಿದೆ. ಅಲ್ಲಿ ವಾಸ್ತವ್ಯ ಹೂಡಿದ್ದ ಅನೇಕರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ. ಲಾಡ್ಜ್ನ ವಿವಿಧ ಕೊಠಡಿ ಹಾಗೂ ಹೊರಗಡೆ ದಟ್ಟ ಹೊಗೆ ಸೇವಿಸಿರುವ ಕಾರಣ ಅನೇಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ.
ಹೈದರಾಬಾದ್ನ ಪಾಸ್ಪೋರ್ಟ್ ಕಚೇರಿಯ ಪಕ್ಕದಲ್ಲಿ ರೂಬಿ ಲಕ್ಸುರಿ ಪ್ರೈಡ್ ಎಂಬ ಐದು ಅಂತಸ್ತಿನ ಕಟ್ಟಡವಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋ ರೂಮ್ ನೆಲಮಾಳಿಗೆಯಲ್ಲಿದ್ದು, ಉಳಿದ ನಾಲ್ಕು ಕಟ್ಟಡಗಳಲ್ಲಿ ಹೋಟೆಲ್ ಕಮ್ ಲಾಡ್ಜ್ ಇದೆ. ರಾತ್ರಿ 9:40ರ ವೇಳೆ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದ್ದು,ತಕ್ಷಣವೇ ಶೋ ರೂಮ್ನಲ್ಲಿದ್ದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟಗೊಂಡಿವೆ. ಹೀಗಾಗಿ, ವಿಷಕಾರಿ ಹೊಗೆ ಲಾಡ್ಜ್ ರೂಂಗಳಿಗೆ ವ್ಯಾಪಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸಚಿವರಾದ ತಲಸಾನಿ ಶ್ರೀನಿವಾಸ್ ಯಾದವ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹೋಟೆಲ್ನಲ್ಲಿ 25-30 ಪ್ರವಾಸಿಗರು ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 8 ಜನರು ಸಾವನ್ನಪ್ಪಿದ್ದಾರೆಂದು ಹೈದರಾಬಾದ್ ಉತ್ತರ ವಲಯದ ಡಿಸಿಪಿ ಚಂದನಾ ದೀಪ್ತಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಪರಿಹಾರ:
ಸಿಕಂದರಾಬಾದ್ ಅಗ್ನಿ ಅವಘಡಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಇದರ ಜೊತೆಗೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
Previous Articleಅಜ್ಜಿ ತನ್ನ ಗಂಡನ ವಿರುದ್ಧ ಕೊಟ್ಟ ದೂರು ಎನು ಗೊತ್ತಾ?
Next Article ಅಂಗನವಾಡಿಗಳಿಂದಲೇ NEP