ಬೆಂಗಳೂರು, ಸೆ.13- ಅಂಗನವಾಡಿಗಳಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರವಾಗಿ ಬೋಧನಾ ಪದ್ದತಿಯನ್ನು ಅಳವಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾಪೂರ್ವ ಶಿಕ್ಷಣ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‍ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದರು.
ನೂತನ ಶಿಕ್ಷಣ ನೀತಿಯನ್ವಯ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸಲು ಈಗಾಗಲೇ ಆರು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳ ಶಿಫಾರಸು ಆಧರಿಸಿ ಪಠ್ಯಕ್ರಮ ಸೇರಿ ಇತರ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸದರಿ ಪಠ್ಯ ಕ್ರಮ ಬೋಧನೆಗಾಗಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.
ಈ ವರ್ಷ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಎನ್‍ಇಪಿ ಅನುಸಾರ ಶಾಲಾ ಪೂರ್ವ ಶಿಕ್ಷಣವನ್ನು ಜಾರಿ ಮಾಡಲಾಗುವುದು. ತದನಂತರ ಅಗತ್ಯವಿದ್ದರೆ ಕಾರ್ಯಕರ್ತರಿಗೆ ಆರು ತಿಂಗಳಿನಿಂದ ಒಂದು ವರ್ಷದ ಡಿಫ್ಲೋಮಾ ತರಬೇತಿ ನೀಡಲಾಗುವುದು. ಎನ್‍ಇಪಿ ಪಠ್ಯ ಕ್ರಮ ಬೋಧನೆಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಸದ್ಯಕ್ಕೆ ಎನ್‍ಇಪಿ ಜಾರಿ ಮಾಡಿಲ್ಲ, ತರಬೇತಿ ಸೇರಿ ಅಗತ್ಯವಾದ ಪೂರ್ವ ತರಬೇತಿ ನಡೆಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು. ಅದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಕೇಂದ್ರ ಸರ್ಕಾರವೇ ಶೀಘ್ರ ಶಾಲಾಪೂರ್ವ ಶಿಕ್ಷಣವನ್ನು ಘೋಷಣೆ ಮಾಡಲಿದೆ ಎಂದರು.
Previous Articleಉಸಿರುಗಟ್ಟಿ ಎಂಟು ಮಂದಿ ದುರ್ಮರಣ
Next Article ಮಹಾರಾಷ್ಟ್ರದಲ್ಲಿ ಸಾಧುಗಳಿಗೆ ಥಳಿತ