ಬೆಂಗಳೂರು,ಮಾ.20:
ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ತತ್ತರಗೊಂಡಿರುವ ರಾಜ್ಯದ ಜನತೆಗೆ ಯುಗಾದಿಗೆ ಮುನ್ನವೇ ಮತ್ತೊಂದು ಬೆಲೆ ಏರಿಕೆಯ ಹೊರೆ ಬಿದ್ದಿದೆ.
ಖರೀದಿ ಮತ್ತು ಪೂರೈಕೆಯಲ್ಲಾಗುವ ನಷ್ಟ, ತಮ್ಮ ನೌಕರರ ಸಂಬಳ ಮತ್ತು ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ರಾಜ್ಯದ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳು ಗ್ರಾಹಕರಿಗೆ ನೀಡುವ ಪ್ರತಿ ಯೂನಿಟ್ ವಿದ್ಯುತ್ ಹೆಚ್ಚುವರಿ ಯಾಗಿ ಸರಾಸರಿ 36 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.
ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೋರಿ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಆದೇಶ ನೀಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಪ್ರತಿ ಯೂನಿಟ್ ಗೆ ಸರಾಸರಿ 36 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿದ್ದು ಪರಿಷ್ಕೃತ ದರಗಳು ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ.
ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಸಂಸ್ಥೆಗಳ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿ ಹೆಚ್ಚಳಕ್ಕೆ ಬೇಕಾಗುವ ಹಣವನ್ನು ಗ್ರಾಹಕರಿಂದಲೇ ಸರ್‌ಚಾರ್ಜ್ ಮೂಲಕ ವಸೂಲಿ ಮಾಡಲು ಕೆಇಆರ್‌ಸಿ ಅನುಮತಿಸಿದೆ.
ಈ ಕುರಿತು ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆ ಅನುಸಾರ 2025-26ನೇ ಸಾಲಿಗೆ 36 ಪೈಸೆ, 2026-27ನೇ ಸಾಲಿಗೆ 35 ಪೈಸೆ, 2027-28ನೇ ಸಾಲಿಗೆ 34 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲು ಕೆಇಆರ್‌ಸಿ ಅನುಮತಿಸಿದೆ.