ಬೆಂಗಳೂರು,ನ.26-
ವಿಧಾನಸಭೆ ಉಪಚುನಾವಣೆಯ ಸೋಲಿನ ಆಘಾತದ ನಡುವೆಯೇ ನಾಯಕತ್ವದ ವಿರುದ್ಧ ಧ್ವನಿ ಎತ್ತಿರುವ ಕೆಲವು ನಾಯಕರು ವಕ್ಫ್ ವಿರುದ್ಧ ಪರ್ಯಾಯ ಹೋರಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಕಾರ್ಯಕರ್ತರಿಗೆ ಬಹಿರಂಗಪಟ್ಟಣ ಬರೆದಿದ್ದಾರೆ.
ಉಪಚುನಾವಣೆ ಸೋಲಿನಿಂದ ಯಾರೂ ಅಧೀರರಾಗಬೇಕಾಗಿಲ್ಲ. ಅಧಿಕಾರ ದುರ್ಬಳಕೆ ಮತ್ತು ಹಣ ಹಂಚಿ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಸಂಘಟನಾತ್ಮಕವಾಗಿ ನಾವು ಗೆದ್ದಿದ್ದೇವೆ ಎಂದು ಹೇಳಿದ್ದಾರೆ.
ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ. ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ. ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತ ಆಗಿದೆ ಎಂದು ಭಾವಿಸೋಣ ಎಂದಿದ್ದಾರೆ.
ಕಾಂಗ್ರೆಸ್ಸಿಗರು ಉಪ ಚುನಾವಣೆಯ ಗೆಲುವಿಗಾಗಿ ತಮ್ಮ ಬೆನ್ನು ತಟ್ಟಿಕೊಂಡು ಸಂಭ್ರಮಿಸಬೇಕಾಗಿಲ್ಲ. ಅವರ ಮುಂದೆ ದೊಡ್ಡ ಜವಾಬ್ದಾರಿಯಿದೆ, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಹಾದಿಯಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ತಮ್ಮ ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಗದ ಸ್ಥಿತಿಯನ್ನು ಸರಿದೂಗಿಸಿಕೊಳ್ಳಲು ಇತರ ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕಿದ್ದಾರೆ.
ಹತ್ತು ಹಲವು ಇಲಾಖೆಗಳು ಕೆಲಸವಿಲ್ಲದೇ ನಿಂತಲ್ಲೇ ನಿಂತಿವೆ. ಯುವಕರಿಗಾಗಿ ಉದ್ಯೋಗ ಸೃಷ್ಟಿಯಾಗಿಲ್ಲ, ರೈತರಿಗಾಗಿ ಯಾವುದೇ ಹೊಸ ನೀರಾವರಿ ಯೋಜನೆ ಆರಂಭವಾಗಲಿಲ್ಲ, ಮಹಿಳಾ ಉದ್ಯೋಗಕ್ಕಾಗಿ ಕಾರ್ಯಕ್ರಮ ರೂಪಿಸಲಿಲ್ಲ, ಶಿಕ್ಷಣ ಸುಧಾರಣೆಗಾಗಿ ಕನಿಷ್ಠ ಕಾರ್ಯಕ್ರಮವನ್ನೂ ರೂಪಿಸಲಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಶಕ್ತಿಗಳು ಪಕ್ಷವನ್ನು ವಿಭಜಿಸುವ ಅಥವಾ ನಾಯಕತ್ವದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿವೆ ಇಂತಹ ಶಕ್ತಿಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ ಇಂಥವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷದ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಮುಂದುವರಿಯಬೇಕು ಎಂದು ಹೇಳಿದ್ದಾರೆ
ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶ ಇದ್ದೇ ಇದೆ. ಅದೇ ರೀತಿ ಶಿಸ್ತು, ಸಂಯಮಗಳು ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ. ಈ ಕ್ಷಣಕೂ ಪ್ರತಿಯೊಬ್ಬ ಕಾರ್ಯಕರ್ತರು, ಪ್ರಮುಖರು ಹಾಗೂ ಹಿರಿಯರೊಂದಿಗೆ ವಿಶ್ವಾಸ, ಪ್ರೀತಿಯನ್ನು ಬೆಳೆಸುಳಿಸಿಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಸಂಕಲ್ಪ ನನ್ನದಾಗಿದೆ ಎಂದಿದ್ದಾರೆ.
Previous Articleಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ-ಡಿ.10ಕ್ಕೆ ವಿಚಾರಣೆ.
Next Article ಅಧಿಕಾರ ತ್ಯಾಗದ ಡಿಸಿಎಂ ಹೇಳಿಕೆ ಹುಟ್ಟು ಹಾಕಿದ ಚರ್ಚೆ.