ಬೆಂಗಳೂರು,ಸೆ.30-ತನ್ನ ಕಾಲು ತುಳಿದ ಎಂಬ ಆಕ್ರೋಶದಲ್ಲಿ ಹಾಲು ವ್ಯಾಪಾರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ ಜ್ಞಾನಭಾರತಿ ಸೊಣ್ಣೇನಹಳ್ಳಿಯಲ್ಲಿ ನಡೆದಿದೆ.
ಸೊಣ್ಣೇನಹಳ್ಳಿಯ ಮೂರ್ತಿ (52) ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ಕೀರ್ತಿ (27)ಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕೊಲೆಯಾದ ಮೂರ್ತಿ ಹಾಗೂ ಕೃತ್ಯ ನಡೆಸಿದ ಕೀರ್ತಿ ನೆರೆಹೊರೆಯವರು. ಮೂರ್ತಿ ಹಸು ಸಾಕಾಣಿಕೆ ಕೆಲಸ ಮಾಡುತ್ತಿದ್ದರೆ,ಕೀರ್ತಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಮೂರ್ತಿ ಅವರ ಸಹೋದರನ ಮನೆಯಲ್ಲಿ ನಿನ್ನೆ ಪಿತೃಪಕ್ಷದ ಪೂಜೆ ಇದ್ದುದರಿಂದ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಸೇರಿದ್ದರು.
ರಾತ್ರಿ ಮನೆಯಲ್ಲಿ ಮದ್ಯಪಾನ ಮಾಡುತ್ತಾ ಪಾರ್ಟಿ ಮಾಡುತ್ತಿದ್ದಾಗ ಪಾನಮತ್ತ ಮೂರ್ತಿ ಆರೋಪಿಯ ಕಾಲು ತುಳಿದಿದ್ದಾರೆ. ಇದರಿಂದ ಕೋಪಗೊಂಡ ಕೀರ್ತಿ ಗಲಾಟೆ ಮಾಡಿ ಮೂರ್ತಿಯ ಹೊಟ್ಟೆಗೆ ಚಾಕು ಇರಿದಿದ್ದಾನೆ. ಪರಿಣಾಮ, ತೀವ್ರ ರಕ್ತಸ್ರಾವದಿಂದ ಮೂರ್ತಿ ಸಾವನ್ನಪ್ಪಿದ್ದಾರೆ.
ಜ್ಞಾನಭಾರತಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು,ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಕೀರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
Previous Articleಜಿಗಣಿಯಲ್ಲಿ ಸಿಕ್ಕಿ ಬಿದ್ದ ಪಾಕ್ ಪ್ರಜೆ.
Next Article ಸಿದ್ದರಾಮಯ್ಯ ಅವರಿಗೆ ED ಉರುಳು .