ಬೆಂಗಳೂರು,ಅ.01: ಮಾಡಲು ಕೆಲಸವಿಲ್ಲದ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಆಡಳಿತದ ಸಮಯದಲ್ಲಿ ಯಾವುದೇ ಗೊತ್ತು ಗುರಿ ಇಲ್ಲದೆ ಸಾರಿಗೆ ಸಂಸ್ಥೆಗಳನ್ನು ನಿರ್ವಹಣೆ ಮಾಡಿದ ಪರಿಣಾಮ ನಿಗಮ 5 ಸಾವಿರದ 600 ಕೋಟಿ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ. ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಅದನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಆಪಾದಿಸಿದರು.
ಬಿಜೆಪಿ ಆಡಳಿತದಲ್ಲಿದ್ದ 2019 ರಿಂದ 2023ರ ಅವಧಿಯಲ್ಲಿ ಯಾವುದೇ ಸಾರಿಗೆ ನಿಗಮದಲ್ಲಿ ಒಂದೇ ಒಂದು ನೇಮಕಾತಿ ಮಾಡಿಕೊಳ್ಳಲಿಲ್ಲ ಒಂದು ಹೊಸ ಬಸ್ ಖರೀದಿ ಮಾಡಲಿಲ್ಲ ನೌಕರರಿಗೆ ಸರಿಯಾಗಿ ಸಂಬಳ ಕೊಡಲಿಲ್ಲ ಈಗ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರು ಸಾರಿಗೆ ಸಂಸ್ಥೆಯ ಸ್ಥಿತಿಯ ಬಗ್ಗೆ ತಮ್ಮೊಂದಿಗೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಅವರ ಅವಧಿಯಲ್ಲಿ ಆದ ನಷ್ಟ ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಆದ ಲಾಭದ ಬಗ್ಗೆ ಅಂಕಿ ಅಂಶಗಳನ್ನು ನೀಡುತ್ತೇನೆ ಎಂದು ಸವಾಲು ಹಾಕಿದರು.
ಬಿಜೆಪಿಯ ಕೆಲಸವಿಲ್ಲದ ಕೆಲವು ನಾಯಕರಿಗೆ ಸುಮಾರು 700 ಮಂದಿ ಸಾಮಾಜಿಕ ಜಾಲತಾಣದ ತಂಡ ಸುಳ್ಳು ಸುದ್ದಿಗಳನ್ನು ಹರಡುತ್ತಾ ಟ್ವೀಟ್ ಮಾಡಿಕೊಂಡು ಕಾಲ ಕಳೆಯುತ್ತದೆ ಈ ನಾಯಕರಿಗೆಲ್ಲ ನಾನು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕುತ್ತೇನೆ ಎಂದು ಹೇಳಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರಿಗೆ ನಿಗಮಗಳನ್ನು ನಷ್ಟದಿಂದ ಹೊರ ತರುವ ಪ್ರಯತ್ನ ಮಾಡುತ್ತಿದ್ದೇವೆ ನಿಗಮಕ್ಕೆ ಒಂಬತ್ತು ಸಾವಿರ ನೌಕರರ ನೇಮಕಾತಿ ಪ್ರಕ್ರಿಯೆ ಆರಂಭಿಸಿತು ಈಗಾಗಲೇ 2600 ಜನ ನೇಮಕಗೊಂಡಿದ್ದಾರೆ 6300 ಹೊಸ ಬಸ್ ಖರೀದಿಗೆ ತೀರ್ಮಾನಿಸಿದ್ದು ಈಗಾಗಲೇ ರೂ.3400 ಖರೀದಿ ಮಾಡಲಾಗಿದೆ. ಎಂದು ವಿವರಿಸಿದರು.
ನಿಗಮದ ನೌಕರರ ವೇತನವನ್ನು ಶೇಕಡ 17ರಷ್ಟು ಹೆಚ್ಚಳ ಮಾಡುವುದಾಗಿ ಬೊಮ್ಮಾಯಿ ಮತ್ತು ಶ್ರೀರಾಮುಲು ಒಪ್ಪಂದ ಮಾಡಿಕೊಂಡು ಮೋಸ ಮಾಡಿದ್ದಾರೆ ಆದರೆ ತಮ್ಮ ಸರ್ಕಾರ ಈ ಹೆಚ್ಚಳ ಮಾಡಿರುವ ವೇತನ ನೀಡಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಕೆಲಸವಿಲ್ಲದ ಬಿಜೆಪಿ ನಾಯಕರಿಗೆ ಸಾರಿಗೆ ಸಚಿವರ ಸವಾಲ್.
Previous Articleವೀರ ಸಾವರ್ಕರ್ ಸಿನಿಮಾದ ಸುಳ್ಳು.
Next Article 56 ವರ್ಷಗಳ ನಂತರ ಸಿಕ್ಕ ಮೃತ ದೇಹಗಳು.