ಸಧ್ಯ ಕನ್ನಡದಲ್ಲಿ ಓಡುವ ಕುದುರೆ ಜೀ ಕನ್ನಡ. ಮುಟ್ಟಿದ್ದೆಲ್ಲ ಚಿನ್ನ. ಎಲ್ಲ ಧಾರಾವಾಹಿಗಳೂ ರಿಯಾಲಿಟಿ ಷೋಗಳೂ ಒಂದಕ್ಕಿಂತ ಒಂದು ಜನಪ್ರಿಯ. ಆದರೆ ಒಂದು ವಿಷಯ ಗಮನಿಸಿದ್ದೀರಾ? ಜೀ ಕನ್ನಡದಲ್ಲಿ ಒಂದೇ ಒಂದು ಒರಿಜಿನಲ್ ಧಾರಾವಾಹಿ ಇಲ್ಲ. ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆಜೊತೆಯಲಿ, ಕಮಲಿ, ಪಾರು ಎಲ್ಲವೂ ರೀಮೇಕು. ನಾಗಿಣಿ ಕದ್ದಿದ್ದು ಅನ್ನೋದು ಓಪನ್ ಸಿಕ್ರೆಟ್.
ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಒಂದೆರಡು ಸಲ ಸ್ವಮೇಕ್ ಮಾಡಲು ಕೈ ಹಾಕಿದ್ದುಂಟು. ಆದರೆ ಅದೇನೋ ಭಯ. ಸೋಲಿನ ಭಯ. ನಂ.1 ಸ್ಥಾನ ಕಳೆದುಕೊಳ್ಳುವ ಭಯ. ಹಿಂದೆ ಸರಿಯುವಂತೆ ಮಾಡಿತು ಅಂತಾರೆ ಅವರ ಆಪ್ತರು. ರಿಮೇಕನ್ನು ಚೂರೂ ರೀಮೇಕ್ ಅನ್ನಿಸದಂತೆ ಮಾಡುವುದು ಜೀ ವಾಹಿನಿಯ ಹೆಗ್ಗಳಿಕೆ. ಆದರೆ ಕಳೆದ ಐದು ವರ್ಷಗಳಲ್ಲಿ `ಉಘೇ ಉಘೇ ಮಾದೇಶ್ವರ’ ವಾರಾಂತ್ಯ ಧಾರಾವಾಹಿ ಬಿಟ್ಟರೆ ಯಾವುದೂ ಕನ್ನಡದಲ್ಲಿ ಹುಟ್ಟಿದ ಕಥೆ ಅಲ್ಲ ಅನ್ನೋದು ದುರಂತ. ಕನ್ನಡದ ಮನಸ್ಸು ಹೊಂದಿರುವ ಶ್ರಮಜೀವಿ ರಾಘವೇಂದ್ರ ಹುಣಸೂರು ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ಕನ್ನಡ ಕಾದಂಬರಿ, ಕಥೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಬಹುದೇನೋ!