ಈ ಬಾರಿಯ ಟಾಟಾ ಐಪಿಎಲ್ ಪಂದ್ಯಾವಳಿ ಉದ್ಘಾಟನೆಗೆ ತುಸು ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿ, ಮಹೇಂದ್ರ ಸಿಂಗ್ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ, ಜಡೇಜಾ ನಾಯಕತ್ವದಿಂದ ಕೆಳಗಿಳಿದ ಕಾರಣ ಮುಳುಗುತ್ತಿರುವ ಚೆನ್ನೈ ದೋಣಿಗೆ ಧೋನಿಯೇ ಮತ್ತೆ ನಾವಿಕನಾಗಬೇಕಾಗಿದೆ.
ಈವರೆಗೆ ಆಡಿರುವ ಎಂಟು ಪಂದ್ಯಗಳ ಪೈಕಿ ಕೇವಲ 2ನ್ನು ಗೆದ್ದಿರುವ ಚೆನ್ನೈ, ಅಂಕಪಟ್ಟಿಯಲ್ಲಿ ಮುಂಬೈಗಿಂತ ಕೊಂಚ ಮೇಲಿದೆ ಅಷ್ಟೇ. ಅನುಭವಿ ಆಟಗಾರರನ್ನು ಹೊಂದಿರುವ ಚೆನ್ನೈ ಹಿಂದೆಂದೂ ಇಷ್ಟೊಂದು ಹೀನಾಯವಾಗಿ ಸೋತಿದ್ದಿಲ್ಲ. ನಾಯಕತ್ವದ ಒತ್ತಡವನ್ನು ನಿಭಾಯಿಸುವಲ್ಲಿ ಜಡೇಜಾ ವಿಫಲರಾಗಿರುವುದು ಸ್ಪಷ್ಟವಾಗಿತ್ತು. ನಾಯಕನಾಗಿ ಜಡೇಜಾ ಆಡಿರುವ 8 ಪಂದ್ಯಗಳಲ್ಲಿ ಕೇವಲ 112 ರನ್ ಹಾಗೂ 5 ವಿಕೆಟ್ ಗಳಿಸಿದ್ದು, ಸ್ಟ್ರೈಕ್ ರೇಟ್ ಕೂಡ ಕುಸಿದಿದೆ.
ಹೀಗಾಗಿ, ತನ್ನ ಆಟದ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಜಡೇಜಾ ತೆಗೆದುಕೊಂಡಿದ್ದಾರೆ ಹಾಗೂ ತಂಡವನ್ನು ಮತ್ತೆ ಮುನ್ನಡೆಸುವಂತೆ ಧೋನಿ ಅವರಲ್ಲಿ ಮನವಿ ಮಾಡಿದ್ದಾರೆಂದು ಸಿಎಸ್‌ಕೆಯ ಪ್ರಕಟಣೆ ತಿಳಿಸಿದೆ.
2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದಲ್ಲಿಂದಲೂ ಧೋನಿಯೇ ಆ ತಂಡದ ನಾಯಕರಾಗಿದ್ದರು. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದ ಮೇಲೆ ಚೆನ್ನೈ ತಂಡ ಎರಡು ವರ್ಷ ಅಮಾನತಾಗಿತ್ತು. ತಂಡವನ್ನು ಮುನ್ನಡೆಸಿದ 213 ಪಂದ್ಯಗಳಲ್ಲಿ ಧೋನಿ 130 ಗೆಲುವು ಹಾಗೂ 81 ಸೋಲುಗಳನ್ನು ಕಂಡಿದ್ದು, ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ತಂಡ ನಾಲ್ಕು ಬಾರಿ ಚಾಂಪಿಯನ್ ಕೂಡ ಆಗಿದೆ.
ಭಾನುವಾರ ರಾತ್ರಿ ಹೈದರಾಬಾದ್ ತಂಡದ ವಿರುದ್ಧ ನಡೆಯುವ ಪಂದ್ಯವನ್ನು ಚೆನ್ನೈ ಧೋನಿ ನಾಯಕತ್ವದಲ್ಲೇ ಆಡಲಿದೆ.