ಬೆಂಗಳೂರು – ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿಯ (Tirpuati Timappa) ವೆಂಕಟೇಶ್ವರ ಎಂಬುದು ಆಸ್ತಿಕರ ಬಲವಾದ ನಂಬಿಕೆ.ತಿರುಪತಿಯ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇವರಲ್ಲಿ ಬಲವಾಗಿದೆ.
ಹೀಗಾಗಿ ಪ್ರತಿಯೊಬ್ಬ ಆಸ್ತಿಕನು ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವೆಂಕಟೇಶ್ವರನ ದರ್ಶನ ಮಾಡಿ ಕಾಣಿಕೆ ಸಲ್ಲಿಸಬೇಕೆಂದು ಬಯಸುತ್ತಾನೆ.
ಉದ್ಯಮಿಗಳು, ರಾಜಕಾರಣಿಗಳು, ಜನ ಸಾಮಾನರು ಅಷ್ಟೇ ಏಕೆ,ಕೆಲವು ವಿಜ್ಞಾನಿಗಳೂ ಕೂಡ ವೆಂಕಟೇಶ್ವರನ ದರ್ಶನ ಮಾಡಿ ಕಾಣಿಕೆ ಸಲ್ಲಿಸುತ್ತಾರೆ.
ಅದೂ ಕೂಡ ವಿಧ ವಿಧವಾದ ಕಾಣಿಕೆಗಳು ತಿಮ್ಮಪ್ಪನ ಹುಂಡಿಯನ್ನು ಸೇರುತ್ತವೆ.ಇದರ ಸಾಲಿಗೆ ಇದೀಗ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ಬಂಗಾರದ ಶಂಖವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ದಾಂಪತ್ಯ ಜೀವನಕ್ಕೆ ಈಗ ಬರೋಬ್ಬರಿ ನಲವತ್ತೈದು ವರ್ಷ.
ಇಷ್ಟೊಂದು ಸುದೀರ್ಘ ಕಾಲದ ದಾಂಪತ್ಯ ಜೀವನವನ್ನು ಅನ್ಯೋನ್ಯತೆಯಿಂದ ಕಳೆದಿರುವ ಈ ದಂಪತಿ ಇದೀಗ ತಮ್ಮ ನಲವತ್ತು ವರ್ಷಗಳಲ್ಲಿ ಅವಧಿಯಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.