ಬೆಂಗಳೂರು:
ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ನ ನಾಲ್ಕು ಖಾಲಿ ಸ್ಥಾನಗಳ ನಾಮಕರಣ ಸದಸ್ಯರ ನೇಮಕಾತಿ ಕುರಿತ ಅಂತಿಮ ನಿರ್ಧಾರ ಹೊರ ಬಿದ್ದಿದೆ ಹೈಕಮಾಂಡ್ ಅನುಮೋದನೆಯೊಂದಿಗೆ ನಾಲ್ವರ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಭವನಕ್ಕೆ ರವಾನಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಅನಿವಾಸಿ ಭಾರತೀಯ ಕೋಶದ (ಎನ್‌ಆರ್‌ಐ) ಉಪಾಧ್ಯಕ್ಷೆ ಆರತಿ ಕೃಷ್ಣ, ಪತ್ರಕರ್ತ ಮೈಸೂರು ಮೂಲದ ಶಿವಕುಮಾರ್ ಹಾಗೂ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಮುಖಂಡ ಜಕ್ಕಪ್ಪನವರ್ ಅವರ ಹೆಸರು ರವಾನಿಸಲಾಗಿದೆ.
ಸಹಕಾರ ಸಮಾಜ ಸೇವೆ ಮಾಧ್ಯಮ ಮತ್ತು ಶಿಕ್ಷಣ ವಲಯದಲ್ಲಿ ಈ ನಾಲ್ವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಇವರ ಹೆಸರುಗಳಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.,
ಈ ಹಿಂದೆ ಈ ಸ್ಥಾನಗಳಿಗೆ ನಾಮಕರಣ ಮಾಡಲು ಅಂತಿಮಗೊಳಿಸಲಾಗಿದ್ದ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹಾಗೂ ದಲಿತ ಹೋರಾಟಗಾರ ಡಿಜಿ ಸಾಗರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ,
ಈ ಇಬ್ಬರ ಬದಲಿಗೆ ದಲಿತ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಜಕ್ಕಪ್ಪನವರ್ ಮತ್ತು ಪತ್ರಕರ್ತ ಶಿವಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಾನಾ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ನಾಮನಿರ್ದೇಶನಕ್ಕಾಗಿ ಹಲವು ಮಂದಿ ಆಕಾಂಕ್ಷಿಗಳಿದ್ದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರನ್ನು ಅಂತಿಮಗೊಳಿಸಿದ್ದಾರೆ.