ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆಗೆ ಏರಲು ಕಾರ್ಯತಂತ್ರದ ಮೂಲಕ ನೆರವಾಗಿದ್ದ ಖ್ಯಾತ ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೊಸ ಪಕ್ಷವನ್ನು ಘೋಷಿಸುವ ಮಹತ್ವ ನಿರ್ಧಾರ ಮಾಡಿದ್ದಾರೆ.
ಟಿಎಂಸಿ ಜೆಡಿ ಯು ಅಥವಾ ಕಾಂಗ್ರೆಸ್ ಸೇರಲು ಸಿದ್ದತೆ ನಡೆಸಿದ್ದ ಅವರು ಇನ್ನೇನು ಕಾಂಗ್ರೆಸ್ ಸೇರ್ಪಡೆಯಾದರು ಎನ್ನುತ್ತಿರುವಾಗಲೆ ಅಲ್ಲಿನ ಬೆಳವಣಿಗೆಗಳಿಂದ ಬೇಸರಗೊಂಡು ಹೊರ ನಡೆದಿದ್ದರು.ಇದೀಗ ತಾವೇ ಹೊಸಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ.
ಹೊಸ ಪಕ್ಷದ ಹೆಸರನ್ನು ನೋಂದಣಿ ಮಾಡಿರುವ ಅವರು, ಬಿಹಾರದಿಂದಲೇ ಆರಂಭ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸುಧಾರಣೆಗೆ ಹಲವು ಸಲಹೆಗಳನ್ನು ನೀಡಿದ್ದ ಅವರಿಗೆ ಕಾಂಗ್ರೆಸ್ ನಾಯಕರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಅವರ ಮುಂದಿನ ನಡೆ ಏನಿರಬಹುದು ಎಂಬ ಬಗ್ಗೆ ಕುತೂಹಲ ವ್ಯಕ್ತವಾಗಿತ್ತು. ಇದೀಗ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್ ಸ್ವಂತ ರಾಜಕೀಯ ಪಕ್ಷ ಘೋಷಿಸುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.
ಹೊಸ ಪಕ್ಷ ಸ್ಥಾಪಿಸಲು ಇದು ಸರಿಯಾದ ಸಮಯ ಎಂದುಕೊಂಡಿದ್ದೇನೆ. ಬಿಹಾರದಿಂದ ಈ ಪ್ರಯತ್ನ ಆರಂಭವಾಗಲಿದೆ’ ಎಂದು ಅವರು ಟ್ವಿಟ್ ಮಾಡಿದ್ದಾರೆ.