ಬೆಂಗಳೂರು, ಅ. 01: ಭಾರತೀಯ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಖ್ಯಾತ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ಈ ಬಾರಿ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಈ ಬಗ್ಗೆ ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ರವರು‘ಮಿಥುನ್ ಅವರ ಸಿನಿಮಾ ಜರ್ನಿ ನಿಜಕ್ಕೂ ಹಲವು ತಲೆಮಾರಿಗಳಿಗೆ ಸ್ಫೂರ್ತಿ. ದಾದಾಸಾಹೇಬ್ ಫಾಲ್ಕೆ ಆಯ್ಕೆ ಸಮಿತಿ ಮಿಥುನ್ ಚಕ್ರವರ್ತಿಗೆ ಈ ಅವಾರ್ಡ್ ನೀಡಲು ನಿರ್ಧರಿಸಿದೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಈ ಅವಾರ್ಡ್ ನೀಡಲಾಗುತ್ತಿದೆ’ಎಂದು ಟ್ವೀಟ್ ಮಾಡಿದ್ದಾರೆ.
ಸಿನಿಮಾ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ 1969 ರಿಂದಲೂ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತ ಬಂದಿದ್ದು ಈ ಪ್ರಶಸ್ತಿಯನ್ನು ಚಿತ್ರೋತ್ಸವಗಳ ನಿರ್ದೇಶನಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ವಾರ್ಷಿಕವಾಗಿ ನೀಡುತ್ತದೆ.
ಈ ಬಾರಿ 70ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ ಕಾರ್ಯಕ್ರಮ ಅಕ್ಟೋಬರ್ 8ರಂದು ನಡೆಯಲಿದ್ದು ಈ ವೇಳೆ ಮಿಥುನ್ ಚಕ್ರವರ್ತಿಗೆ ಅವಾರ್ಡ್ ನೀಡಿ ಗೌರವಿಸಲಿದೆ. ಸದ್ಯ ಪ್ರಧಾನ ಮಂತ್ರಿ ಮೋದಿಯವರು, ಕರ್ನಾಟಕದ ಮುಖ್ಯಮಂತ್ರಿಗಳು ಸೇರಿದಂತೆ ಚಿತ್ರರಂಗದ ಅನೇಕರು ಮಿಥುನ್ ಚಕ್ರವರ್ತಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಿಥುನ್ ಚಕ್ರವರ್ತಿರವರು 1976ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ‘ಮೃಗಯಾ’ ಅವರ ನಟನೆಯ ಮೊದಲ ಸಿನಿಮಾ. ಅವರಿಗೆ ಮೊದಲ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು, ಇತ್ತೀಚಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ‘ಸುರಕ್ಷಾ’, ‘ಡಿಸ್ಕೋ ಡ್ಯಾನ್ಸರ್’, ‘ಡ್ಯಾನ್ಸ್ ಡ್ಯಾನ್ಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದು, ಅನೇಕ ರಿಯಾಲಿಟಿ ಶೋಗೆ ಹೋಸ್ಟ್ ಆಗಿದ್ದಾರೆ. ಕನ್ನಡಲ್ಲಿ ಇತ್ತೀಚಿಗೆ 2018ರಲ್ಲಿ ತೆರೆ ಕಂಡ ‘ದಿ ವಿಲನ್’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.