ಬೆಂಗಳೂರು,ಸೆ.3:
ರಾಜ್ಯ ರಾಜಕಾರಣದಲ್ಲಿ ಇದೀಗ ಭೂ ಅಕ್ರಮ ಆರೋಪಗಳು ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿವೆ. ರಾಜ್ಯ ಸರ್ಕಾರದ ಮಂತ್ರಿಗಳ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧದ ಆರೋಪ ರಾಜಭವನದ ಕದ ತಟ್ಟಿದೆ.
ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಕೆ ಐ ಎ ಡಿ ಬಿ ಯಿಂದ ಸಿ.ಎ. ನಿವೇಶನ ಪಡೆಯುವಲ್ಲಿ ಅಕ್ರಮ ಮಾಡಿದ್ದಾರೆ ಜೊತೆಗೆ ಸ್ವಜನ ಪಕ್ಷಪಾತ ನಡೆದಿದೆ ಎಂದು ಆರೋಪಿಸಿದ ನಾರಾಯಣಸ್ವಾಮಿ ಈ ಬಗ್ಗೆ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಈ ಎರಡೂ ಪ್ರಕರಣಗಳ ಬಗ್ಗೆ ವಿವರಣೆ ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯರನ್ನು ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿ ಎ ನಿವೇಶನ ಆಕ್ರಮವಾಗಿ ಪಡೆದಿದ್ದಾರೆ ಎಂದು ಆರೋಪಿಸಿ 61 ಪುಟಗಳ ಸುದೀರ್ಘ ದೂರೊಂದನ್ನು ನಿಯೋಗ ರಾಜ್ಯಪಾಲರಿಗೆ ಸಲ್ಲಿಸಿದೆ.
2002 ರ ನವೆಂಬರ್ 28 ರಿಂದ 2004 ರ ಮೇ 5 ರ ನಡುವೆ ಕರ್ನಾಟಕ ವಸತಿ ಮಂಡಳಿ ನಿರ್ದೇಕರಾಗಿದ್ದ ಛಲವಾದಿ ನಾರಾಯಣ ಸ್ವಾಮಿಯವರು ಭೂ ಕಬಳಿಕೆ ಮಾಡಿ ತಾವು ಅಧ್ಯಕ್ಷರಾಗಿರುವ ಆದರ್ಶ ಸೋಶಿಯಲ್ ಅಂಡ್ ಎಜುಕೇಷನ್ ಟ್ರಸ್ಟ್‌ಗೆ ಬಳಸಿಕೊಂಡಿದ್ದು, ಶಾಲೆ ನಿರ್ಮಿಸಿದ್ದಾರೆ ಎಂದು ದೂರಿದ್ದಾರೆ.
ಈ ಹಗರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 13, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 316, 318ರ ಅಡಿ ತನಿಖೆ ನಡೆಸಲು ಅನುಮತಿ ನೀಡಬೇಕು ಹಾಗೂ ನಾರಾಯಣಸ್ವಾಮಿಯವರ ವಿಧಾನಪರಿಷತ್‌ನ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಮನವಿ ಒತ್ತಾಯಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಂ, ಮಂಜುನಾಥ್ ಭಂಡಾರಿ, ಎಸ್.ರವಿ ವಸಂತಕುಮಾರ್, ಅನಿಲ್‌ಕುಮಾರ್, ದಿನೇಶ್‌ಗೂಳಿಗೌಡ, ಪುಟ್ಟಣ್ಣ, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಸೇರಿದಂತೆ ಹಲವರು ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.
Previous Articleಟೈಗರ್ ಅಶೋಕ್ ಕುಮಾರ್ ಗೆ ವಂಚಕರ ಕಾಟ.
Next Article ಚಾಮುಂಡಿ ಬೆಟ್ಟದಲ್ಲಿ ಇದನ್ನು ಮಾಡುವಂತಿಲ್ಲ.